Friday, November 22, 2024

ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಲು ಕಸರತ್ತು..!

ಬೆಂಗಳೂರು : 2023ರ ಸಾರ್ವತ್ರಿಕ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಮೂರೂ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಸಾಕಷ್ಟು ವಿವಾದಗಳಿಂದಲೇ ಸುದ್ದಿ ಮಾಡಿರುವ, ಆಡಳಿತರೂಢ ಬಿಜೆಪಿಯ ಭವಿಷ್ಯ ಬರೆಯಲಿದ್ದಾರೆ ರಾಜ್ಯದ ಜನ. ಹೌದು, ರಾಜ್ಯದಲ್ಲಿ ಕಮಲ ಪಾಳಯದ ನಾಯಕರು ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಅಣಿಯಾಗುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಬೆಳವಣಿಗೆಯಿಂದ ತಲೆ ಬಿಸಿ ಮಾಡಿಕೊಂಡಿರುವ ಬಿಜೆಪಿ ನಾಯಕರು ಇದೀಗ ಜನೋತ್ಸವದ ಮೂಲಕ ಜನರನ್ನು ಸೆಳೆಯಲು ನೋಡ್ತಿದೆ.

ಹೀಗಾಗಿ, ಜನೋತ್ಸವ ಮಾಡ್ಬೇಕು ಅಂತ ಬಿಜೆಪಿ ತಯಾರಿ ನಡೆಸಿದೆ. ಬಿಜೆಪಿ ನಾಯಕರಿಗೆ ಕರಾವಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಿಂದ ಅಸಮಾಧಾನದ ಕಿಡಿ ನಾಯಕರಿಗೆ ಭಾರಿ ತಲೆನೋವಾಗಿತ್ತು. ಅಸಮಾಧಾನದ ಹೊಗೆ ಹೆಚ್ಚಾಗಬಹುದು ಎಂಬ ಕಾರಣದಿಂದ ಜನೋತ್ಸವ ಸಮಾವೇಶಕ್ಕೆ ಫುಲ್‌ಸ್ಟಾಪ್ ಹಾಕಲಾಗಿತ್ತು. ಇದೀಗ ಮತ್ತೆ ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲೇ ಜನೋತ್ಸವ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇದ್ರ ಜೊತೆಗೆ, ರಾಜ್ಯ ಪ್ರವಾಸ, ಚುನಾವಣಾ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯ್ತು.

ಈ ಸಭೆಯಲ್ಲಿ ಸೆಪ್ಟೆಂಬರ್ 8ರ ಸಮಾವೇಶ ಹಾಗೂ ರಾಜ್ಯ ಪ್ರವಾಸದ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಿ ಹಲವು ವಿಚಾರಗಳ ಬಗ್ಗೆ ತೀರ್ಮಾನ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಫಲಾನುಭವಿಗಳಿದ್ದಾರೆ. ಇವರನ್ನು ‌ಸಂಪರ್ಕಿಸುವ ಕಾರ್ಯಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದೆ. ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿಯವ್ರ ಹುಟ್ಟುಹಬ್ಬ‌, ಅಕ್ಟೋಬರ್ 2ಕ್ಕೆ ಗಾಂಧಿ ಜಯಂತಿ ಇರೋದ್ರಿಂದ ಇದರ ನಡುವೆ ‌ಸೇವಾ ಪಾಕ್ಷಿಕ ಹೆಸರಿನಡಿಯಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್ ನಾಯಕರು ಅರೋಪಗಳ ಮೇಲೆ ಅರೋಪ‌ ಮಾಡಿ‌ದ್ರು. ಈ ಮೂಲಕ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವ ಪ್ರಯತ್ನ ಮಾಡ್ತಿವೆ. ಬಿಟ್ ಕಾಯಿನ್, ಪಿಎಸ್‌ಐ ಹಗರಣ, 40% ಕಮಿಷನ್ ಆರೋಪ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಪೇಚಿಗೆ ಸಿಲುಕುವಂತೆ ಮಾಡಿದ್ರು ಕಾಂಗ್ರೆಸ್ ನಾಯಕರು.‌ ಈ ಆರೋಪಗಳಿಗೆ ತಿರುಗೇಟು ನೀಡೋದಕ್ಕೆ ಕಮಲ ಕಲಿಗಳು ಬ್ಲೂ ಪ್ರಿಂಟ್ ರೆಡಿ ಮಾಡಿದ್ದಾರೆ. ಕಾಂಗ್ರೆಸ್ ಕಾಲದ ಹಗರಣಗಳನ್ನು ಹೊರಗೆ ತಂದು, ಅದನ್ನು ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸೋದ್ರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಒಟ್ನಲ್ಲಿ, ಚುನಾವಣಾ ಸಿದ್ದತೆಯಲ್ಲಿರುವ ಕಮಲ‌ಪಾಳಯದ ನಾಯಕರು, ವಿಪಕ್ಷಗಳ ನಾಯಕರ ಆರೋಪಗಳಿಗೆ ತಿರುಗೇಟು ನೀಡಲು ಹಾಗೂ ಚುನಾವಣಾ ಅಖಾಡಕ್ಕಿಳಿಯಲು ಅಸ್ತ್ರಗಳನ್ನು ರೆಡಿ ಮಾಡಿಕೊಳ್ತಿದ್ದಾರೆ. ಒಂದು ಕಡೆ ಜನೋತ್ಸವ ಸಮಾವೇಶದ ಸಿದ್ಧತೆ ಮಾಡಿಕೊಳ್ಳೋದ್ರ ಜೊತೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳ ಬಗ್ಗೆ ತನಿಖೆ ಮಾಡಿಸೋದಕ್ಕೆ ಸರ್ಕಾರ ಸಿದ್ದವಾಗ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಇದ್ರಿಂದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

ರೂಪೇಶ್ ಬೈಂದೂರು ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES