ರಾಮನಗರ : ಇಂದು ಭಾರೀ ಮಳೆಯಾಗುವ ಮುನ್ಸೂಚನೆಯಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಬದಲಿ ಮಾರ್ಗದಲ್ಲಿ ಸಂಚರಿಸುವುದು ಒಳ್ಳೆಯದು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.
ಬೆಂಗಳೂರು-ಕನಕಪುರ ಅಥವಾ ಬೆಂಗಳೂರು-ಕುಣಿಗಲ್ ಮಾರ್ಗವಾಗಿ ಮೈಸೂರು ತಲುಪುವಂತೆ ಪೊಲೀಸರು ಸಲಹೆ ಮಾಡಿದ್ದಾರೆ. ಸ್ವಲ್ಪ ಮಳೆ ಸುರಿದರೂ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಒಂದು ವೇಳೆ ಮಳೆ ಪ್ರಮಾಣ ಹೆಚ್ಚಾದರೆ ಹೆದ್ದಾರಿಯಲ್ಲಿ ಪ್ರವಾಹದಂತೆ ನೀರು ನುಗ್ಗುತ್ತದೆ. ಹೀಗಾಗಿಯೇ ಬದಲಿ ಮಾರ್ಗದ ಮೂಲಕ ಸಂಚರಿಸುವುದು ಒಳಿತು ಎಂದು ಪೊಲೀಸರು ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ಸುರಿದಿದ್ದ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹಲವು ಸಮಸ್ಯೆಗಳಾಗಿದ್ದವು. ಸಂಚಾರವನ್ನೇ ನಿರ್ಬಂಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಆಗಸ್ಟ್ 30ರಂದು ಭಾರೀ ಮಳೆ ಸುರಿದ್ದಿದ್ದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ವಿವಿಧೆಡೆ ಕೆರೆಗಳು ತುಂಬಿ, ಕೋಡಿ ನೀರು ಹೆದ್ದಾರಿಯ ಮೇಲೆ ಹರಿದು ಬಂದಿತ್ತು. ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ H.D.ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದರು.