ಶಿವಮೊಗ್ಗ: ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದ ಮುಖ್ಯಮಂತ್ರಿಗಳನ್ನು ನಾನು ಕಂಡಿದ್ದೇನೆ. ಸಮಾಜಮುಖಿ ಹಾಗೂ ಬಡವರ ಪರವಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಯಡಿಯೂರಪ್ಪ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಯಡಿಯೂರಪ್ಪ ಅವರನ್ನ ಬಣ್ಣಿಸಿದರು.
ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, 20 ಸಾವಿರ ಕೆಲಸ ಮಾಡುವ ಅವಕಾಶ ನಮ್ಮ ಇಲಾಖೆಗೆ ಇದೆ. ರಾಜ್ಯದಲ್ಲಿ 800 ವಸತಿ ಶಾಲೆಗಳನ್ನು ನಾರಾಯಣ ಗುರುಗಳ ಹೆಸರಿನಲ್ಲಿ ತೆರೆಯುತ್ತಿದ್ದೇವೆ. ಅಲ್ಲಿ ಇಲ್ಲಿ ಲೋಪಗಳು ಇರಬಹುದು ನಾನೂ ಇಲ್ಲ ಎಂದು ಹೇಳುವುದಿಲ್ಲ. ಕಳೆದ ವರ್ಷಗಳಲ್ಲಿ ನಮ್ಮ ವಸತಿ ಶಾಲೆ ಮಕ್ಕಳು ಐಐಟಿ ಯಲ್ಲಿ ಅವಕಾಶ ಪಡೆಯುತ್ತಿದ್ದಾರೆ ಎಂದರು.
ಪ್ರಸ್ತುತ ದಿನಗಳಲ್ಲಿ ಬಡವರ ಮಕ್ಕಳು ಕರಾಟೆ ಕಲಿಯುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಹೆಣ್ಣುಮಕ್ಕಳು ಕರಾಟೆ ಪ್ರದರ್ಶನ ಮಾಡುತ್ತಾರೆ. ಎರಡು ಹಂಚುಗಳನ್ನು ಹೆಣ್ಣು ಮಗಳು ಕೈಯಿಂದ ಒಡೆಯುತ್ತಾಳೆ. ಈಗ ಅವಳ ರಕ್ಷಣೆ ಅವಳೆ ಮಾಡಿಕೊಳ್ಳುತ್ತಾಳೆ.
ಸೇವಾ ಸಿಂಧುವಿನಲ್ಲಿ ಒಂದೇ ದಿನಕ್ಕೆ 8 ಸಾವಿರ ಅರ್ಜಿಗಳು ಬಂದಿವೆ. ಅರಿವು ಯೋಜನೆಯನ್ನು ಮತ್ತೆ ನಿನ್ನೆಯಿಂದ ಮತ್ತೆ ಜಾರಿಗೆ ತರಲಾಗಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆ ಕಮೀಷನ್, ಈ ಕಮೀಷನ್ ಕೋಟಾ ಶ್ರೀನಿವಾಸ್ ಪಡೆದಿದ್ದಾನೆ ಎಂದು ಯಾರಾದ್ರು ಸಾಬೀತಾದರೆ ನಾನೂ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ. ನಮ್ಮ ಇಲಾಖೆಯಿಂದ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಈ ಮೂಲಕ ಹೇಳುತ್ತೇನೆ ಎಂದು ಸಚಿವರು ತಿಳಿಸಿದರು.