Saturday, November 23, 2024

BBMP ವಿಶೇಷ ಆಯುಕ್ತರ ನೇತೃತ್ವದ ಕಮಿಟಿಯಲ್ಲಿ ಅಕ್ರಮ..?

ಬೆಂಗಳೂರು : ಬಿಬಿಎಂಪಿಯಲ್ಲಿರೋ ಭ್ರಷ್ಟರಿಗೆ ಮೂಗುದಾರ ಹಾಕೋರೇ ಇಲ್ಲ. ಕೋವಿಡ್ ಹೆಸರಿನಲ್ಲಿ ಬಿಬಿಎಂಪಿಯನ್ನ ಗುಡಿಸಿ ಗುಂಡಾಂತರ ಮಾಡಿಬಿಟ್ಟಿದ್ದಾರೆ. ಕೋವಿಡ್ ಕೇರ್ ಸೆಂಟರ್, ಆರ್​​ಟಿಪಿಆರ್ ಟೆಸ್ಟ್, ಆಂಟಿಜೆನ್ ಟೆಸ್ಟ್, ಕೋವಿಡ್ ಮೆಡಿಸಿನ್, ಮೃತರಿಗೆ ಪರಿಹಾರ ನೀಡುವುದರಿಂದ ಹಿಡಿದು ಹೆಜ್ಜೆಹೆಜ್ಜೆಗೂ ಕೋಟಿ ಕೋಟಿ ಗುಳುಂ ಆಗಿದೆ. ಪ್ರತಿಯೊಂದಕ್ಕೂ ಬೋಗಸ್ ಬಿಲ್​ಗಳನ್ನ ಸೃಷ್ಠಿ ಮಾಡಿದ್ದಾರೆ. ಬಾಕಿ ಇರೋ ಬಿಲ್ ಗಳಿಗೂ ಬೇಕಾಬಿಟ್ಟಿ ಹಣ ರಿಲೀಸ್ ಮಾಡೋ ಷಡ್ಯಂತ್ರ ರೂಪಿಸಿದ್ದಾರೆ. ಇದೆಲ್ಲದರ ಬಗ್ಗೆ ತನಿಖೆ ನಡೆಸಿ, ಪಾರದರ್ಶಕತೆ ಕಾಪಾಡಲು ವಿಶೇಷ ಆಯುಕ್ತರ ನೇತೃತ್ವದಲ್ಲಿ ರಚನೆಯಾಗಿದ್ದ ಕಮಿಟಿಯೇ ದಾರಿ ತಪ್ಪಿದೆ.

ಈ ಹಿಂದೆ ಬೋಗಸ್ ಬಿಲ್​ಗಳಿಗೆ ಬಿಡುಗಡೆಯಾಗಿರುವ ನೂರಾರು ಕೋಟಿ ಹಣದ ಬಗ್ಗೆ ಲೆಕ್ಕವೇ ಕೇಳ್ತಿಲ್ಲ. ಬಾಕಿ ಇರೋ ಬಿಲ್​ಗಳನ್ನ ಮಾತ್ರ ಕ್ಲಿಯರ್ ಮಾಡಿ, ಕೈತೊಳೆದುಕೊಳ್ಳಲು ಪ್ಲಾನ್ ಮಾಡಿದ್ದಾರೆ. ಬಿಲ್ ಪಾವತಿಯಲ್ಲಿ ಅಕ್ರಮ ಕಂಡು ಬಂದಿರೋ ಬಗ್ಗೆ ಮುಖ್ಯ ಆರೋಗ್ಯಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ರು. ಇದ್ಯಾವುದರ ಕಡೆಯೂ ಗಮನ ಕೊಡದೇ ಬೇಕಾಬಿಟ್ಟಿ ಹಣ ರಿಲೀಸ್ ಮಾಡಲು ಮುಂದಾಗಿದ್ದಾರೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್​​ಪುರ ನೇತೃತ್ವದಲ್ಲಿ ಆರು ಸದಸ್ಯರನ್ನೊಳಗೊಂಡ ಕಮಿಟಿಯನ್ನ ರಚನೆ ಮಾಡಲಾಗಿದೆ. ಈ ಹಿಂದೆ ಹಣಕಾಸು ವಿಭಾಗಕ್ಕೆ ಸ್ಪೆಶಲ್ ಕಮಿಶನರ್ ಆಗಿದ್ದ ತುಳಸಿ ಮದ್ದಿನೇನಿ ಅವ್ರನ್ನೂ ಕಮಿಟಿಗೆ ವಿಶೇಷ ಆಹ್ವಾನಿತರಾಗಿದ್ದಾರೆ‌‌. ವಿಪರ್ಯಾಸ ಏನಪ್ಪಾ ಎಂದ್ರೆ, ತುಳಸಿ ಮದ್ದಿನೇನಿ ಅವಧಿಯಲ್ಲೂ ಬೋಗಸ್ ಬಿಲ್​ಗಳಾಗಿವೆ ಅನ್ನೋ ಶಂಕೆ ವ್ಯಕ್ತವಾಗಿದೆ‌. ಸಮಗ್ರ ತನಿಖೆ ಆಗಿದ್ದೇ ಆದಲ್ಲಿ, ಪಾಲಿಕೆಯಲ್ಲಿ‌ನ ಹಿರಿಯ ಅಧಿಕಾರಿಗಳೂ ಸೇರಿದಂತೆ ಹಲವರ ತಲೆದಂಡ ಫಿಕ್ಸ್ ಆಗಲಿದೆ.

ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲಾಗಿ ಎಗ್ಗಿಲ್ಲದೇ ಭ್ರಷ್ಟಾಚಾರ ನಡೆಸಿರೋ ಬಗ್ಗೆ ತಿಳಿದು ಬಂದಿದೆ. ಬಿಬಿಎಂಪಿ ಅಧಿಕಾರಿಗಳು 10-25% ಕಮಿಷನ್ ಪಡೆದುಕೊಂಡು ಹಿಂದೆ ಮುಂದೆ ನೋಡದೇ ಬಿಲ್​ಗಳನ್ನ ಮಂಜೂರು ಮಾಡಿದ್ದಾರೆ. ಕೋವಿಡ್ ಎರಡನೇ ಅಲೆ, ಮೂರನೇ ಅಲೆಯಲ್ಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತಲೆಯೇ ಕೆಡಿಸಿಕೊಳ್ತಿಲ್ಲ. ಈ ಮೂಲಕ ಪಾಲಿಕೆ ಹಾಗೂ ಬೆಂಗಳೂರಿಗರ ಕಣ್ಣಿಗೆ ಮಣ್ಣೆರೆಚೋ‌ ಕೆಲಸವನ್ನ ಕಮಿಟಿ ಸದಸ್ಯರೇ ಮಾಡ್ತಾ ಇದ್ದಾರೆ..

ಆನಂದ್ ನಂದಗುಡಿ ಸ್ಪೆಶಲ್ ಕರೆಸ್ಪಾಂಡೆಂಟ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES