ಬೆಂಗಳೂರು : ಮುಖ್ಯಮಂತ್ರಿಗಳು ನನ್ನನ್ನು ಕೊಲೆ ಮಾಡುವಂತೆ ತಮ್ಮ ಕಾರ್ಯಕರ್ತರಿಗೆ ಆದೇಶಿಸಿದ್ದಾರೆ ಅಂತ ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ನಿವಾಸದ ಮೇಲೆ ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ವಿಧಾನಸೌಧದ ಎದುರು ಸುದ್ದಿಗಾರರೊಂದಿಗೆ ಮಾತಾನಾಡಿದ ಪ್ರೀತಂಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ಧ ಕೊಲೆ ಆದೇಶದ ಆರೋಪ ಮಾಡಿದರು.
‘’ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು, ಪ್ರೀತಂ ಗೌಡ ಮತ್ತು ಅವರ ಕುಟುಂಬವನ್ನು ಹುಡುಕಿ, ಪ್ರೀತಂಗೌಡನನ್ನು ಕೊಲೆ ಮಾಡಿ ಎಂದು ಆದೇಶ ಕೊಟ್ಟಿದ್ದಾರೆ. ಪ್ರೀತಂಗೌಡ ಮತ್ತು ಅವರ ಕುಟುಂಬ ಇರಬಾರದು ನೀವು ಅವರನ್ನು ಸರ್ವನಾಶ ಮಾಡಿ ಎಂದು ರೇವಣ್ಣ ಮತ್ತು ಕುಮಾರಸ್ವಾಮಿ ತಮ್ಮ ಗೂಂಡಾ ಕಾರ್ಯಕರ್ತರಿಗೆ ಹೇಳಿದ್ದಾರೆ ‘’ ಅಂತ ಪ್ರೀತಂ ಗೌಡ ಆರೋಪಿಸಿದ್ದಾರೆ.
ಆಪರೇಷನ್ ಕಮಲದ ವಿಚಾರವಾಗಿ ಮಾತನಾಡುತ್ತಾ ಪ್ರೀತಂಗೌಡ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಪ್ರೀತಂ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಿಡಿಗೇಡಿಗಳು ಮನೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪ್ರೀತಂಗೌಡರ ಬೆಂಬಲಿಗನಿಗೆ ಕಲ್ಲೇಟು ಬಿದ್ದು ಕಣ್ಣಿನ ಬಳಿ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.