ಅಪ್ಪು ಇನ್ನಿಲ್ಲ ಅನ್ನೋದು ಮಾತಷ್ಟೇ. ಕನ್ನಡಿಗರ ಹೃದಯಗಳಲ್ಲಿ ಅವ್ರು ದೇವರ ಸ್ಥಾನ ಪಡೆದಿದ್ದಾರೆ. ದೇವರಂತೆ ಪೂಜಿಸುತ್ತಾ, ಆರಾಧಿಸ್ತಿದ್ದಾರೆ ಕಲಾಭಿಮಾನಿಗಳು. ಅದ್ರಲ್ಲೂ ಈ ಬಾರಿಯ ಗಣೇಶೋತ್ಸವಕ್ಕೆ ಗಣಪನ ಜೊತೆ ಅಪ್ಪು ಪ್ರತಿಮೆಯನ್ನೂ ಕೂರಿಸ್ತಿದ್ದಾರೆ ಅಭಿಮಾನಿ ದೇವರುಗಳು. ಅದೆಲ್ಲಿ ಏನು ಅನ್ನೋದ್ರ ಜೊತೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್ವುಡ್ ಅಪ್ಡೇಟ್ಸ್ ಕೊಡ್ತೀವಿ.
- ಅಂಕೋಲಾದಲ್ಲಿ 8 ಅಡಿ ಎತ್ತರದ ಪುನೀತ್ ಪ್ರತಿಮೆಗೆ ಪೂಜೆ
ರಾಜರತ್ನ ಅಪ್ಪು ಅಜರಾಮರ. ಕುಲಕೋಟಿ ಕನ್ನಡಿಗರ ಅಚ್ಚುಮೆಚ್ಚಿನ ರಾಜಕುಮಾರ ಸದಾ ನಮ್ಮ ಹೃದಯಗಳಲ್ಲಿ ನೆಲೆಸಿರುತ್ತಾರೆ. ಸದ್ಯ ದೇವರಂತೆ ಎಲ್ಲರ ಮನೆ, ಮನ ಬೆಳಗಿರೋ ಅಪ್ಪು, ಇದೀಗ ಅಕ್ಷರಶಃ ದೇವರಂತೆ ಆರಾಧಿಸಲ್ಪಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಗಣೇಶೋತ್ಸವದಂದು ಗಣೇಶ ಮೂರ್ತಿಯ ಜೊತೆ ಅಪ್ಪು ಮೂರ್ತಿಯನ್ನೂ ತಯಾರಿಸಿದ್ದಾರೆ ಕಲಾವಿದರು. ಅಂಕೋಲಾ ಬಳಿ ಶಿಲ್ಪಿಯಿಂದ ಕನ್ನಡದ ಕೋಟ್ಯಧಿಪತಿಯಲ್ಲಿ ಅಪ್ಪು ಅವ್ರನ್ನ ಹೋಲುವಂತಹ ಎಂಟು ಅಡಿ ಎತ್ತರದ ಮಣ್ಣಿನ ಪ್ರತಿಮೆ ತಯಾರಾಗಿದೆ. ಅಂಕೋಲಾ ಬಳಿಯ ಹಳ್ಳಿಯೊಂದರಲ್ಲಿ ಅಪ್ಪು ಅಭಿಮಾನಿ ನಾಗೇಂದ್ರ ಹಾಗೂ ಅವ್ರ ಸಂಗಡಿಗರು ಇದನ್ನ ತಮ್ಮ ಗ್ರಾಮದಲ್ಲಿ ಗಣಪತಿ ಜೊತೆ ಕೂರಿಸೋ ಮೂಲಕ ಅಪ್ಪುವಿಗೂ ಪೂಜೆ, ಪುನಸ್ಕಾರ ಸಲ್ಲುವಂತೆ ಮಾಡ್ತಿದ್ದಾರೆ. ಇದು ನಿಜಕ್ಕೂ ಒಬ್ಬ ಸ್ಟಾರ್ ಅನ್ನೋದಕ್ಕಿಂತ ಅವ್ರ ವ್ಯಕ್ತಿತ್ವಕ್ಕೆ ಸಿಗುತ್ತಿರೋ ಅತಿ ದೊಡ್ಡ ಗೌರವ ಅಂದ್ರೆ ತಪ್ಪಾಗಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ