Friday, November 22, 2024

ಚಂದ್ರದ್ರೋಣ ಪರ್ವತ ಸಾಲು ನೀಲಿಮಯ..!

ಚಿಕ್ಕಮಗಳೂರು : 12 ವರ್ಷಕ್ಕೊಮ್ಮೆ ಅರಳುವ ಹೂ. ಹೂವಿಂದ ಹೂವಿಗೆ ಹಾರ್ತಾ, ಮಕರಂದವನ್ನು ಹೀರ್ತಿರುವ ಜೇನು. ಹೌದು……ಈ ಹೂವಿನ ಹೆಸರು ಕುರುವಂಜಿ. ಗುರ್ಗಿ ಅಂತಾನೂ ಕರೆಯುತ್ತಾರೆ.12 ವರ್ಷಗಳಿಗೊಮ್ಮೆ ಅರಳುವ ಈ ಹೂವು ತಿಂಗಳುಗಳ ಕಾಲ ತನ್ನ ಸೌಂದರ್ಯವನ್ನು ಹೊರಚೆಲ್ಲುತ್ತಾ ಚಂದ್ರದ್ರೋಣ ಪರ್ವತ ಶ್ರೇಣಿಯ ಮತ್ತೊಂದು ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿನಾಡಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಳ್ತಿದೆ.ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರುವ ಈ ಕುರುವಂಜಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಸಾಲಿನಲ್ಲಿ ಮಾತ್ರ ಅರಳೋ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅರಳಿ ನಿಂತಿದೆ. ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆಗುಡ್ಡ ಸುತ್ತಲೂ ಹುಲುಸಾಗಿ ಅರಳಿ ನಿಂತಿದೆ. ಈ ಹೂವು ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನು ಭೂ ಲೋಕದ ಸ್ವರ್ಗವಾಗಿಸ್ತಿದೆ.

ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವಳ್ಳಿದೇವಿಯನ್ನು ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ರಿಂದ ಈ ಗುರ್ಗಿಯನ್ನು ಕೇರಳ, ತಮಿಳುನಾಡಿಗರು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತಲೂ ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳುವ ಪ್ರಭೇದದ ಹೂವುಗಳೂ ಇವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿರೋದ್ರಿಂದ ನಾನಾ ಕಾಯಿಲೆಗೂ ಔಷಧಿಯಾಗಿ ಬಳಸುತ್ತಾರೆ. ಸದ್ಯಕ್ಕೆ ಕಾಫಿನಾಡಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರುವ, ಮತ್ತಷ್ಟು ಅರಳುವ ಸನಿಹದಲ್ಲಿದ್ದು ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗನ ಕಣ್ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಒಟ್ಟಾರೆ ಪ್ರಕೃತಿಯ ಒಡಲಾಳದಲ್ಲಿ ಇನ್ನೆಷ್ಟು ಸೌಂದರ್ಯದ ರಾಶಿ ಮನೆ ಮಾಡಿದ್ಯೊ ಬಲ್ಲೋರ್ಯಾರೂ ಇಲ್ಲ. ಕಾಫಿನಾಡಿನಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ. ಈವರೆಗೆ ಹಸಿರಿನಿಂದ ಕಂಗೊಳಿಸುವ ಬೆಟ್ಟಗುಡ್ಡಗಳನ್ನು ನೋಡಿದ್ದ ನಾವು-ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನು ನೋಡ್ಬೇಕು ಅಂದ್ರೆ, ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲುವ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನೋದಂತೂ ಸತ್ಯ.

ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು.

RELATED ARTICLES

Related Articles

TRENDING ARTICLES