ಮೈಸೂರು: ಮುರುಘಾ ಮಠದ ಶ್ರೀಗಳಿಂದ ಲೈಂಗಿಕ ದೌರ್ಜನ್ಯ ಆರೋಪ ಅಡಿ ಮಕ್ಕಳ ಪರ ಮೈಸೂರಿನಲ್ಲಿ ಪ್ರಕರಣ ದಾಖಲಿಸಿದ್ದ ಒಡನಾಡಿ ಸಂಸ್ಥೆಯ ಕೌನ್ಸಲರ್ ಸರಸ್ವತಿ ಅವರು ಮಾತನಾಡಿದ್ದಾರೆ.
ಜುಲೈ 24 ರಂದು ಮಕ್ಕಳು ಸ್ವಾಮೀಜಿಯ ದೌರ್ಜನ್ಯದಿಂದ ಬೇಸತ್ತು ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದಾರೆ. ಅಲ್ಲಿ ಬಹಳಷ್ಟು ಸಮಯ ಒಂದೇ ಕಡೆ ನಿಂತಿದ್ದರಿಂದ ಆಟೋ ಚಾಲಕರೊಬ್ಬರು ಅವರನ್ನು ವಿಚಾರಿಸಿ, ಸಮೀಪದ ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ ಎಂದರು.
ಠಾಣೆಯಲ್ಲಿ ಮಕ್ಕಳು ಯಾರನ್ನು ಭೇಟಿ ಮಾಡಿದ್ರು ಅನ್ನೋ ಮಾಹಿತಿ ನಮಗಿಲ್ಲ. ಆದರೆ ಠಾಣೆಗೆ ಹೋಗಿರೋದು ನಿಜ. ಮಕ್ಕಳು ಭಯದ ಕಾರಣಕ್ಕೆ ತಮ್ಮ ಮೇಲೆ ಆಗಿರೋ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಲ್ಲ. ಸ್ವಾಮೀಜಿಯವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾರೆ. ಕೆಟ್ಟದಾಗಿ ನಿಂದಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ.
ಠಾಣೆಯಲ್ಲಿ ಸತ್ಯ ಹೇಳಿದ್ರೆ ಸ್ವಾಮೀಜಿಯವರು ಪ್ರಭಾವಿಗಗಳು, ತೊಂದರೆ ಆಗಬಹುದು ಎಂಬ ಕಾರಣಕ್ಕೆ ಸತ್ಯ ಹೇಳಿಲ್ಲ. ಪೊಲೀಸರು ಸಂಯಮದಿಂದ ಅವರನ್ನು ವಿಚಾರಿಸಿದ್ದರೆ ಸತ್ಯಾಂಶ ಹೊರಬರುತ್ತಿತ್ತು. ಆದರೆ ಪೊಲೀಸರು ಅಪ್ತಾಪ್ತ ಹೆಣ್ಣು ಮಕ್ಕಳಿಂದ ಸರಿಯಾಗಿ ಮಾಹಿತಿ ಪಡೆಯದೆ ನಿರ್ಲಕ್ಷ್ಯ ಮಾಡಿದ್ದಾರೆ. ಪೊಲೀಸರಿಂದ ನ್ಯಾಯ ಸಿಗುತ್ತೆ ಎಂಬ ಖಾತ್ರಿ ಇದ್ದಿದ್ದರೆ ಆ ಮಕ್ಕಳು ನಮ್ಮ ತನಕ ಬರುತ್ತಿರಲಿಲ್ಲ. ಹೀಗಾಗಿ ಆ ಮಕ್ಕಳು ಬೇರೊಬ್ಬರ ಸಹಾಯ ಪಡೆದು ನಮ್ಮ ಬಳಿ ಬಂದಿದ್ದಾರೆ ಎಂದರು.
ನಾವು ವಿದ್ಯಾರ್ಥಿಗಳ ಪರ ನಿಂತು ಎಫ್.ಐ.ಆರ್. ಮಾಡಿಸಿದ್ದೇವೆ. ಮಕ್ಕಳು ಮಾನಸಿಕ ಸ್ಥಿತಿ ಧೃಡವಾಗಿಯೇನೂ ಇಲ್ಲ. ತುಂಬಾ ಹೆದರಿಕೆಯಿಂದಲೇ ನಮ್ಮ ಬಳಿ ಆಗಿರೋ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಹೇಳಿದರು.