ಚಾಮರಾಜನಗರ: ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಗುಂಡ್ಲುಪೇಟೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಭ್ರಷ್ಟಾಚಾರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸಚಿವರುಗಳು ಗುತ್ತಿಗೆದಾರರಿಂದ 50% ಕಮಿಷನ್ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ಕಡೆ 100% ಕಮಿಷನ್ ಸಹ ಆಗುತ್ತಿದೆ ಎಂದು ಗೊತ್ತಾಗಿದೆ. ಕೆಲಸನೇ ಮಾಡದೇ ಹಣ ಬಿಡುಗಡೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ಹೇಳುತ್ತಾರೆ ನಾನು ತಿನ್ನಲ್ಲ ತಿನ್ನಲು ಬಿಡಲ್ಲ ಅಂತ ಹಾಗಾದರೆ ಇಲ್ಲಿ ಏನು ನಡೆಯುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಅರ್ಜಿ ಬರೆದರೂ ಏನು ಆಗಿಲ್ಲ ಮೋದಿಗೆ ನಾಚಿಗೆ ಆಗಬೇಕು. ಈಶ್ವರಪ್ಪ ಕಮಿಷನ್ ವಿಚಾರದಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು ಸಾಕ್ಷಿ ಇದ್ದರು ಬಂಧಿಸಲಿಲ್ಲ. ನಾವು ಹೋರಾಟ ಮಾಡಿದ್ದಕ್ಕೆ ಮಾತ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದು, ಸಿಎಂ ಬೊಮಾಯಿ ಅವರೇ ಈಶ್ವರಪ್ಪ ಕಮಿಷನ್ ಪಡೆದಿಲ್ಲ ಎಂದು ಹೇಳಿಕೆ ಕೊಟ್ಟರೆ ಅಧಿಕಾರಿಗಳು ಏನು ಮಾಡಲು ಸಾಧ್ಯ ಎಂದರು.
ಇನ್ನು ಬಿಜೆಪಿ ಪಕ್ಷದ ಕಾರ್ಯಕರ್ತ ಸಂತೋಷ ಪಾಟೀಲ್ ನನ್ನ ಸಾವಿಗೆ ಈಶ್ವರಪ್ಪನೇ ಕಾರಣ ಎಂದು ವಾಟ್ಸಾಪ್ನಲ್ಲಿ ಹಾಕಿದರೂ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಮೂರೇ ತಿಂಗಳಲ್ಲಿ ಬಿ ರಿರ್ಪೋಟ್ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ನೈತಿಕತೆ ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಕ್ರಮಕೈಗೊಳ್ಳದೇ ಇಲ್ಲ ಸಲ್ಲದ ಕೆಲಸ ಮಾಡುತ್ತಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.