ದೇವನಹಳ್ಳಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ ನೋಡಿದ್ರೆ 10-15 ಪರಪ್ಪನ ಅಗ್ರಹಾರ ಜೈಲು ನಿರ್ಮಾಣ ಆಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ನಡಿತಿರುವ ಭ್ರಷ್ಟಾಚಾರ ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ವಾ, ಕರ್ನಾಟಕದಲ್ಲಿ ಏನು ನಡೆಯುತ್ತಿದೆ ನೀವು ಏನು ಮಾಡ್ತಿದ್ದೀರಿ, ಈಗಿನ ಭ್ರಷ್ಟಾಚಾರ ನೋಡಿದ್ರೆ ರಾಜ್ಯದಲ್ಲಿ 10 ರಿಂದ 15 ಪರಪ್ಪನ ಅಗ್ರಹಾರ ಜೈಲುಗಳ ಬೇಕು. ಕರ್ನಾಟಕದಲ್ಲಿ ನಡಿತಿರೋ ಆಕ್ರಮಗಳು ಇಡಿಗೆ ಗೊತ್ತಿಲ್ವಾ, ಐಟಿ ಯವರಿಗೆ ಗೊತ್ತಿಲ್ವಾ, ಕೇಂದ್ರದ ಗೃಹ ಇಲಾಖೆಗೆ ಗೊತ್ತಿಲ್ವಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಹೆಚ್ಡಿಕೆ ಹರಿಹಾಯ್ದರು.
ರಾಜ್ಯದ ಒಬ್ಬೊಬ್ಬ ಅಧಿಕಾರಿಯು ತಿಂಗಳು-ತಿಂಗಳು ಹಣ ಕಲೆಹಾಕುತ್ತಿದ್ದಾರೆ. ಈಗಿನ ಕೈಗಾರಿಕಾ ಸಚಿವರದ್ದು ಬ್ರಹ್ಮಾಂಡ ಭ್ರಷ್ಟಾಚಾರ ಇದೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡೋದು ಮುರುಗೇಶ್ ನಿರಾಣಿ ಕೆಲಸ. ಬೆಂಗಳೂರಿನಲ್ಲಿ ಬದಕಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಬೆಂಗಳೂರು ಸುತ್ತಮುತ್ತ ಕೈಗಾರಿಕಾ ಬರಬೇಕು ಎಂಬ ಚಿಂತನೆ ಬಿಡಿ, ಕೃಷಿಯೇತರ ಭೂಮಿಗಳಲ್ಲಿ ಕೈಗಾರಿಕೆಗಳನ್ನ ಆರಂಭ ಮಾಡಿ, ಫಲವತ್ತಾದ ಜಮೀನನ್ನ ಭೂಸ್ವಾಧೀನ ಮಾಡೋದು ಬೇಡ ಎಂದು ಸಚಿವ ಮುರುಗೇಶ್ ನಿರಾಣಿ ವಿರುದ್ದ ಹೆಚ್ ಡಿ ಕೆ ಆರೋಪ ಮಾಡಿದರು.