ಹಾಸನ: ಸ್ವಾಮೀಜಿಯೊಬ್ಬ ನಿಮ್ಮ ಜಮೀನಿನಲ್ಲಿರೋ ನಿಧಿ ತೆಗೆಯುತ್ತೇನೆಂದು ಮೋಸ ಮಾಡಿ, ಲಕ್ಷಲಕ್ಷ ಹಣ ಪೀಕಿ ಎಸ್ಕೇಪ್ ಆಗಿರೋ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಮಗ್ಗೆ ಗ್ರಾಮದ ಮಂಜೇಗೌಡ ಹಾಗೂ ಲೀಲಾವತಿ ಎಂಬ ದಂಪತಿಗಳು ಮೋಸ ಹೋಗಿದ್ದಾರೆ. ದೊಡ್ಡಹಳ್ಳಿ ಗ್ರಾಮದ ಮಂಜೇಗೌಡ ಎಂಬಾತ ನನಗೆ ದೇವರು ಬರುತ್ತದೆ. ನಮಗೆ ದೈವ ಶಕ್ತಿ ಇದೆ ಎಂದು ನಂಬಿಸಿ, ನಿಮ್ಮ ಜಮೀನಿನಲ್ಲಿ ನಿಧಿ ಇದೆ. ಚಿನ್ನದ ದೇವರ ವಿಗ್ರಹ ಇದೆ ಅಂತಾ ಎಂದು ಹೇಳುತ್ತಾನೆ. ಅವರ ಮಾತಿಗೆ ಮರುಳಾದ ಚಿನ್ನದ ಆಸೆಯಿಂದ ದಂಪತಿಗಳು ಅದನ್ನ ತೆಗೆಸೋದಕ್ಕೆ ಮುಂದಾಗ್ತಾರೆ.
ಅದನ್ನ ತೆಗೆಯಬೇಕಾದ್ರೆ ಸಾಕಷ್ಟು ಪೂಜೆ ಹಾಗೂ ಮನೆಯ ಹೆಂಗಸಿನ ರಕ್ತದ ಅಭಿಷೇಕ ಮಾಡಬೇಕಾಗುತ್ತದೆ. ಐದು ಲಕ್ಷ ಹಣ ಖರ್ಚಾಗುತ್ತದೆ ಎಂದು ಸ್ವಾಮೀಜಿ ಹೇಳ್ತಾನೆ. ಅದಕ್ಕೆ ಒಪ್ಪಿಕೊಂಡು ಪೂಜೆ ಮಾಡಿಸೋದಕ್ಕೆ ಮುಂದಾಗ್ತಾರೆ. ಅವರ ಜಮೀನಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಮೊದಲೇ ಹೋಗಿ ಮೂರು ಕೆಜಿ ತೂಕದ ಚಿನ್ನ ಲೇಪಿತ ಬೆಳ್ಳಿಯ ವಿಗ್ರಹವನ್ನ ಹೂತಿಟ್ಟು ಬಂದಿರುತ್ತಾನೆ. ಅದೇ ಜಾಗದಲ್ಲಿ ಸಾಕಷ್ಟು ಪೂಜೆಮಾಡಿ ಚಿನ್ನಲೇಪಿತ ಬೆಳ್ಳಿ ವಿಗ್ರಹವನ್ನ ಹೊರಗೆ ತೆಗೆಯುತ್ತಾನೆ.
ಹೊರಗೆ ತೆಗೆಯುತ್ತಿದ್ದಂತೆ ಮಂಜೇಗೌಡ ಪತ್ನಿ ಲೀಲಾವತಿ ಅವರ ಕೈ ಕೊಯ್ದು ರಕ್ತದ ಅಭಿಷೇಕ ಮಾಡುತ್ತಾನೆ. ಕೈ ಕೊಯ್ಯುವ ವೇಳೆ ಕೈ ನರವನ್ನ ಕಟ್ ಮಾಡಿರುತ್ತಾನೆ. ಏನೋ ಮಿಸ್ಸಾಗಿ ಆಗಿರಬಹುದೆಂದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಳ್ತಾರೆ.
ಘಟನೆ ನಡೆದು ಒಂದು ವಾರದ ಬಳಿಕ ಜುಯೆಲರ್ಸ್ ಅಂಗಡಿಗೆ ಹೋಗಿ ಪರೀಕ್ಷೆ ಮಾಡಿಸಿದಾಗಲೇ ಮನೆಯವರಿಗೆ ಗೊತ್ತಾಗಿರೋದು ನಾವು ಮೋಸ ಹೋಗಿದ್ದೇವೆಂದು. ಇದೀಗ ಈ ಕಳ್ಳ ಸ್ವಾಮೀಜಿ ದಂಪತಿಗೆ ಮೋಸ ಮಾಡಿ, ಐದು ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದ್ದಾನೆ. ಮೋಸದ ಬಗ್ಗೆ ಜನರಿಗೆ ತಿಳಿದು ನಮ್ಮ ಬಗ್ಗೆ ನಗುತ್ತಾರೆ ಎಂಬ ಕಾರಣಕ್ಕೆ ಮಂಜೇಗೌಡ ದಂಪತಿ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ ಎಂಬುದು ಗೊತ್ತಾಗಿದೆ.