ಹಾಸನ : ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿರೋ ಕಾಡಾನೆಗಳು. ಪಿಡಿಓ ಸೇರಿ ಅರಣ್ಯ ಇಲಾಖೆ ಸಿಬ್ಬಂದಿಯನ್ನ ಕೂಡಿ ಹಾಕಿದ ಸ್ಥಳೀಯರು. ಈ ದೃಶ್ಯಗಳು ಕಂಡು ಬಂದಿದ್ದು ಹಾಸನ ಜಿಲ್ಲೆಯಲ್ಲಿ.. ಹೌದು, ಜಿಲ್ಲೆಯ ಸಕಲೇಶಪುರ, ಬೇಲೂರು ಹಾಗೂ ಆಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲೂಕಿನ ಗ್ರಾಮಗಳ ಸುತ್ತಮುತ್ತ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ರೈತರ ಬೆಳೆಗಳು ಸಂಪೂರ್ಣ ನಾಶವಾಗಿದೆ. ಜನರು ನಿತ್ಯವೂ ಭಯದಿಂದಲೇ ಓಡಾಡುವ ಪರಿಸ್ಥಿತಿ ಎದುರಾಗಿದೆ. ಕಾಡಾನೆಗಳನ್ನ ಬೇರೆಡೆಗೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದ್ರೂ ಯಾವುದೇ ಪ್ರಯೋಜವಾಗ್ತಿಲ್ಲ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳ ಹಾವಳಿಗೆ ಬೇಸತ್ತ ಜನರು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಪಿಡಿಓ ಅವರನ್ನ ಗ್ರಾಮಪಂಚಾಯತ್ ಕಚೇರಿಯಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಕಳೆದೊಂದು ವಾರದಿಂದ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಬೆಳೆಗಳನ್ನ ಸಂಪೂರ್ಣ ಹಾಳು ಮಾಡಿವೆ. ಸ್ಥಳಕ್ಕೆ ಮೇಲಾಧಿಕಾರಿಗಳ ಬರಬೇಕು, ಅಲ್ಲಿಯವರೆಗೂ ಸಿಬ್ಬಂದಿಯನ್ನ ಬಿಡೋದಿಲ್ಲ ಅಂತಾ ಪ್ರತಿಭಟನೆ ನಡೆಸಿದರು. ಗ್ರಾಮಪಂಚಾತ್ ಸದಸ್ಯ ಚಿದಾನಂದ್ ಮಾತಾನಾಡಿ, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ರು.
ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಶಾಶ್ವತ ಪರಿಹಾರ ಕೊಡಿ ಅಂತಾ ನೂರಾರು ಹೋರಾಟಗಳು ನಡೆಯುತ್ತಿದೆ. ಆದ್ರೂ ದಪ್ಪ ಚರ್ಮದ ಸರ್ಕಾರಗಳು ಹಾಗೂ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಫಲವಾಗುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಇನ್ನಾದ್ರೂ ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚೆತ್ತು ಮಲೆನಾಡು ಭಾಗದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ.
ಸಚಿನ್ ಶೆಟ್ಟಿ ಪವರ್ ಟಿವಿ ಹಾಸನ