ಹಾಸನ : ತನ್ನ ಜೀವನಾಂಶ ಕೇಳಿದ್ದಕ್ಕೆ ಬರ್ಬರವಾಗಿ ಪತ್ನಿಯನ್ನೇ ಪತಿರಾಯ ಕೊಲೆಗೈದ ಘಟನೆ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.
ಕಳೆದ ಒಂಬತ್ತು ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಮೂಲದ ಚೈತ್ರ ಎಂಬಾಕೆಯನ್ನ ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಎಂಬಾತ ಮದುವೆಯಾಗಿದ್ದ. ಚೈತ್ರಾಳಿಗೆ ಮದುವೆ ಇಷ್ಟ ಇಲ್ಲ ಎಂದರೂ ಮದುವೆ ನಂತರವೂ ನಾನೇ ವಿದ್ಯಾಭ್ಯಾಸ ಮಾಡಿಸುತ್ತೇನೆ ಎಂದು ಚೈತ್ರ ಕುಟುಂಬಸ್ಥರ ಮನವೊಲಿಸಿ ಪುಸಲಾಯಿಸಿ ಮದುವೆಯಾಗಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.
ದಂಪತಿಗೆ ಎರಡು ಹೆಣ್ಣು ಮಕ್ಕಳಾದ ನಂತರ ಪತಿ ಶಿವಕುಮಾರ್ ತನ್ನ ವರಸೆ ಬದಲಿಸಿದ್ದನು. ನನಗೆ ಗಂಡು ಮಕ್ಕಳು ಬೇಕಿತ್ತು ಎಂದು ತಗಾದೆ ತೆಗೆದು ಪ್ರತಿನಿತ್ಯ ಪತ್ನಿಗೆ ಹಿಂಸೆ ನೀಡುತ್ತಿದ್ದ. ಈ ಹಿಂದೆ ಈ ಸಂಬಂಧ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿಗಳು ನಡೆದರೂ ಸರಿಯಾಗದಿದ್ದಾಗ ಚೈತ್ರ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ವಿಚಾರಣೆ ನಡೆದು ಪೊಲೀಸರು ಶಿವಕುಮಾರ್‌ನನ್ನು ಕರೆಸಿ ಬುದ್ದಿ ಹೇಳಿ ಕಳಿಸಿದ್ದಾರೆ. ಇಷ್ಟೆಲ್ಲಾ ಆದ್ರೂ ಶಿವಕುಮಾರ್ ತನ್ನ ವರಸೆ ಬದಲಾಯಿಸರಿಲಿಲ್ಲ.
ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದಳಲ್ಲಾ ಎಂದು ದ್ವೇಷದಿಂದ ವಿಚ್ಛೇದನಕ್ಕೆ ತಾನೇ ಅರ್ಜಿ ಸಲ್ಲಿಸಿದ್ದಾನೆ. ಇಷ್ಟೆಲ್ಲಾ ಆದ ಮೇಲೆ ಪತಿ ಶಿವಕುಮಾರ್ ಜತೆಗೆ ಬಾಳಲು ಸಾಧ್ಯವಿಲ್ಲ ಎಂದು ಅರಿತ ಚೈತ್ರ ತನ್ನೆರಡು ಮಕ್ಕಳನ್ನ ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡಿಕೊಂಡು ತನ್ನ ಹಿರಿಯ ಮಗಳನ್ನ ಶಾಲೆಗೆ ಸೇರಿಸಿ ಜೀವನ ಮಾಡುತ್ತಿದ್ದಳು. ಇದೀಗೆ ವಿಚ್ಚೇದನ ಪ್ರಕರಣ ಅಂತ್ಯ ಕಾಣುವ ಹಂತ ತಲುಪಿದೆ ಕಳೆದ ಕೋರ್ಟ್ ವಿಚಾರಣೆಯಲ್ಲಿ ನ್ಯಾಯಾಧೀಶರ ಬಳಿ ನನಗೆ ನನ್ನ ಗಂಡನಿಂದ ವಿಚ್ಛೇದನ ಬೇಡ ಎಂದು ಮನವಿ ಮಾಡಿದ್ದಳಂತೆ. ಇದಕ್ಕೆ ಒಪ್ಪದ ಶಿವಕುಮಾರ್ ನನಗೆ ವಿಚ್ಛೇದನ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ಚೈತ್ರ ತನ್ನ ವಕೀಲರ ಮೂಲಕ ಜೀವನಾಂಶಕ್ಕೆ ಮನವಿ ಸಲ್ಲಿಸಿದ್ದಾಳೆ.
ಇದರಿಂದ ಕೋಪಗೊಂಡಿದ್ದ ಶಿವಕುಮಾರ ಇಂದು ಆಕೆ ಕೋರ್ಟ್‌ಗೆ ಬಂದ ವೇಳೆ ಕೊಲೆ ಮಾಡುವ ಉದ್ದೇಶದಿಂದಲೇ ತಯಾರಾಗಿ ಬಂದಿದ್ದಾನೆ. ವಿಚಾರಣೆಗೆ ಇನ್ನೇನು ಹಾಜರಾಗಬೇಕು ಎನ್ನುವಷ್ಟರಲ್ಲಿ ಪತ್ನಿ ಚೈತ್ರ ಶೌಚಾಲಯಕ್ಕೆ ಹೋಗುವದನ್ನ ಗಮನಿಸಿ ಹಿಂಬಾಲಿಸಿ ಹೋಗಿ ಶೌಚಾಲಯದಲ್ಲೇ ಚಾಕುವಿನಿಂದ ಭೀಕರವಾಗಿ ಕುತ್ತಿಗೆ ಕುಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮತ್ತು ಕುತ್ತಿಗೆಗೆ ಆದ ಗಂಭೀರ ಗಾಯದಿಂದ ಚೈತ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕಿರುಚಾಡಿದ್ದನ್ನ ಗಮನಿಸಿದ ಸ್ಥಳೀಯರು ಶಿವಕುಮಾರ್ ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚೈತ್ರಳನ್ನ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಕರಣ ಗಂಭೀರವಾದ್ದರಿಂದ ಪ್ರಥಮ ಚಿಕಿತ್ಸೆ ಮಾಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನ ಹಾಸನದ ಹಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದ್ರೆ ಬದುಕುಳಿಯುವ ಸ್ಥಿತಿಯಲ್ಲಿರದ ಚೈತ್ರ ಚಿಕಿತ್ಸೆ ಫಲಕಾರಿಯಾಗದೆ ಹಾಸದ ಹಿಮ್ಸ್‌ನಲ್ಲಿ ಸಾವನ್ನಪಿದ್ದಾಳೆ.
ಇತ್ತ ಬೆಂಗಳೂರಿನಲ್ಲೇ ಇರೋ ಐದು ವರ್ಷದ ಹಿರಿಯಮಗಳು ಏನು ಅರಿಯದೆ ಶಾಲೆಯಲ್ಲಿ ತನ್ನ ಪಾಡಿಗೆ ತಾನು ಆಟವಾಡಿಕೊಂಡಿದ್ರೆ ತಾಯಿಯ ಜೊತೆಗೇ ಇದ್ರೂ ಏನು ಅರಿಯದ ಮೂರು ವರ್ಷದ ಮತ್ತೊಬ್ಬ ಹೆಣ್ಣು ಮಗಳು ತನ್ನ ತಾಯಿ ಇಲ್ಲದೇ ತಬ್ಬಲಿಗಳಾಗಿದ್ದು ಘಟನೆ ಕಂಡ ಎಲ್ಲರಿಗೂ ಕರುಳು ಕಿತ್ತು ಬರುವಂತಿತ್ತು. ಪಾಪಿ ಪತಿಗೆ ಪೊಲೀಸರು ಕಠಿಣ ಶಿಕ್ಷೆ ನೀಡಬೇಕು ಎಂದು ಎಲ್ಲರ ಆಗ್ರಹವಾಗಿದೆ. ಪ್ರಕರಣ ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸಿದ್ದು ಕೋರ್ಟ್ ಆವರಣದಲ್ಲೇ ಇಂತಹದ್ದೊಂದು ಘಟನೆ ನಡೆದಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಇರೋ ಜಾಗದಲ್ಲೇ ಹೀಗಾದ್ರೆ ಇನ್ನು ಬೇರೆ ಕಡೆ ಭದ್ರತೆಯ ಗತಿ ಏನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಘಟನೆ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.