ಚಿಕ್ಕಮಗಳೂರು : ಜಿಲ್ಲೆಯಲ್ಲಿ ಈ ಬಾರಿಯ ಮಳೆ ಹಲವರ ಜೀವನ ಕಸಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಹಲವು ಮನೆಗಳು ನೆಲಸಮವಾಗಿದೆ.
ಮೂಡಿಗೆರೆ ತಾಲೂಕಿನ ದಿಣ್ಣೆಕೆರೆಯಲ್ಲಿ ಒಂದು ಮನೆ ನೆಲಸಮವಾಗಿದೆ. ಇಲ್ಲಿನ ದಿನೇಶ್ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ನಾಶವಾಗಿದೆ. ನೆಲ ಸೇರಿದ ಮನೆಯ ಅವಶೇಷಗಳ ಅಡಿಯಲ್ಲಿ ಆಹಾರ ಸಾಮಗ್ರಿ, ಕೂಡಿಟ್ಟ ಹಣ ಎಲ್ಲವೂ ಮಣ್ಣು ಪಾಲಾಗಿದೆ. ಮನೆ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಅಲ್ಲದೇ, ಕಳಸ ತಾಲೂಕಿನ ಕೆಳಗೂಡು ಗ್ರಾಮದಲ್ಲಿ ಹರೀಶ್ ಎಂಬುವರ ಮನೆ ಮೇಲ್ಚಾವಣಿ ಮತ್ತು ಗೋಡೆ ಕುಸಿತವಾಗಿದೆ. ತರೀಕೆರೆ ತಾಲೂಕಿನಲ್ಲೂ ಮತ್ತೆ ಮೂರು ಮನೆಗಳ ಗೋಡೆ ಕುಸಿತವಾಗಿದೆ.
ಬಾವಿಕೆರೆ ಗ್ರಾಮದ ಬಸಪ್ಪ ಹಾಗೂ ಗಂಗಣ್ಣ ಎಂಬವರಿಗೆ ಸೇರಿದ ಮನೆಗಳಿಗೆ ಮತ್ತು ಬಿ.ರಾಮನಹಳ್ಳಿ ಗ್ರಾಮದ ದುರ್ಗಮ್ಮ ಎಂಬುವರ ಮನೆ ಗೋಡೆಯೂ ಹಾನಿಯಾಗಿದೆ. ತೀವ್ರ ಮನೆಯಿಂದ ಹಲವರು ಜೀವನಾಶ್ರಯ ಕಳೆದುಕೊಂಡಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.