ಬೆಂಗಳೂರು : ಕಳೆದ ಒಂದು ವಾರದಿಂದ ಸಿಎಂ ಬದಲಾವಣೆಯ ಚರ್ಚೆ ಜೋರಾಗುತ್ತಿದೆ. ಸ್ವಪಕ್ಷೀಯರೇ ಈ ಬದಲಾವಣೆ ಚರ್ಚೆ ನಡೆಸುತ್ತಿದ್ದಾರೆ. 40% ಕಮಿಷನ್ ವಿಚಾರದಿಂದಲೇ ರಾಜೀನಾಮೆ ಪಡೆಯಲು ಹೈಕಮಾಂಡ್ ಮುಂದಾಗಿದೆ ಅಂತ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುತ್ತಿದೆ. ಇದ್ರಿಂದ ಸರ್ಕಾರಕ್ಕೆ ಭಾರೀ ಮುಜುಗರ ಆಗ್ತಿದೆ.
ಹೀಗಾಗಿ ಸಿಎಂ ಕೂಡ ಈ ಚರ್ಚೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಹೀಗಾಗಿ ಇಷ್ಟು ದಿನ ಕೊರೋನಾ ಪಾಸಿಟಿವ್ ಇದ್ದ ಕಾರಣ ಸಿಎಂ ಹೊರಕ್ಕೆ ಬಂದಿರಲಿಲ್ಲ. ಇದೀಗ ಹೊರ ಬಂದಿರುವ ಸಿಎಂ ಎಲ್ಲಾ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ರು. ಹಾಗೇ ಈ ರೀತಿ ಚರ್ಚೆ ಮಾಡಿದಾಗೆಲ್ಲಾ ಇನ್ನೆರಡು ಗಂಟೆ ಜಾಸ್ತಿ ಕೆಲಸ ಮಾಡ್ತೇನೆ. ನಾನು ಸ್ಥಿತಪ್ರಜ್ಞನಾಗಿದ್ದೇನೆ. ಕಾಂಗ್ರೆಸ್‌ನವರು ಹೇಳಿದಂತೆಲ್ಲ ನಾನು ಇನ್ನಷ್ಟು ಸ್ಥಿರವಾಗುತ್ತೇನೆ. ಪಕ್ಷವನ್ನು ಬಲವರ್ಧನೆ ಮಾಡಿ ಮತ್ತೆ ಅಧಿಕಾರಕ್ಕೆ ತರುತ್ತೇನೆ. ಸಿಎಂ ಬದಲಾವಣೆ ಚರ್ಚೆ ಕಾಂಗ್ರೆಸ್ ಸೃಷ್ಟಿ ಅಂತ ಹೇಳಿದ್ರು.
ಆದ್ರೆ ಸಿಎಂ ಸ್ವಷ್ಟನೆಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಸಿಎಂ ಬದಲಾವಣೆ ಚರ್ಚೆಯನ್ನು ಬಿಜೆಪಿಗರೇ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ ಎಂಬ ಆರೋಪಕ್ಕೂ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ಬಿಜೆಪಿ ಗೊಂದಲಕ್ಕೆ ಕಾಂಗ್ರೆಸ್ ಹೊಣೆಯಾಗುತ್ತದೆಯೇ ಅಂತ ಬಿಜೆಪಿಗರನ್ನ ಪ್ರಶ್ನಿಸಿದ್ದಾರೆ. ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆ ಗೊಂದಲವು ಕೇಳಿ ಬಂದಿದೆ. ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು ಬಿಎಸ್ವೈ ಹೇಳಿದ್ದಾರೆ. ಆದ್ರೆ, ಯಾರು ಹೇಳಿದವರು ಎಂದು ನಳೀನ್ ಕುಮಾರ್ ಕಟೀಲ್ ಕೇಳ್ತಿದ್ದಾರೆ.
ಇತ್ತ ಸಿದ್ದರಾಮಯ್ಯ ಕೂಡ ಬಿಜೆಪಿಗರನ್ನು ಪ್ರಶ್ನಿಸಿದ್ದು, ಚರ್ಚೆ ಹುಟ್ಟು ಹಾಕಿದ್ದು ನಾನಾ ಅಂತ ಪ್ರಶ್ನೆ ಮಾಡಿದ್ದಾರೆ. ಸುರೇಶ್ ಗೌಡ ಹೇಳ್ತಾನೆ ಅಂದ್ರೆ ಏನು ಅರ್ಥ ಅಂತ ವ್ಯಂಗ್ಯವಾಡಿದ್ರು.
ಇನ್ನೊಂದೆಡೆ ಚನ್ನಪಟ್ಟಣದಲ್ಲಿ ಮತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಬದಲಾಗುವ ವಿಚಾರ ನನಗೆ ಗೊತ್ತಿಲ್ಲ. ಅದು ಆ ಪಕ್ಷದ ಆಂತರಿಕ ವಿಚಾರ. ಅದರಿಂದ ನನಗೇನು ಲಾಭವಿಲ್ಲ. ನಮ್ಮದೇನಿದ್ದರೂ 2023ರ ಚುನಾವಣೆ ಎದುರಿಸುವುದೇ ಗುರಿ ಎಂದರು.
ಒಟ್ಟಿನಲ್ಲಿ ಸಿಎಂ ಬದಲಾವಣೆ ಚರ್ಚೆಯನ್ನೇ ದಾಳವಾಗಿಸಲು ಕಾಂಗ್ರೆಸ್ ಹೊರಟಿದೆ. ಇದಕ್ಕೆ ಸ್ಪಷ್ಟನೆ ಮೂಲಕ ಬಿಜೆಪಿ ತಿರುಗೇಟು ನೀಡುತ್ತಿದೆ. ಇದೆಲ್ಲದ್ರಾ ಮಧ್ಯೆ ಸಿಎಂ ಬದಲಾಗ್ತಾರಾ..? ಅಥವಾ ಇಲ್ವಾ..? ಅನ್ನೋದನ್ನು ಕಾದು ನೋಡಬೇಕಿದೆ.
ರೂಪೇಶ್ ಬೈಂದೂರು ಪವರ್ ಟಿವಿ