ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳನ್ನು ತೂಕ ಮಾಡಿಸಲಾಗಿದೆ. ಚಿನ್ನದ ಅಂಬಾರಿಯನ್ನು ಕ್ಯಾಪ್ಟನ್ ಅಭಿಮನ್ಯು ಹೊರಲಿದ್ದಾನೆ. ಆದ್ರೂ, ತೂಕದ ವಿಚಾರದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ನಂ.1 ಆಗಿದ್ದಾನೆ. ಮೊದಲ ತಂಡದಲ್ಲಿ ಬಂದಿರುವ 9 ಆನೆಗಳ ತೂಕ ಮಾಡಿಸಲಾಗಿದೆ. ಮೈಸೂರು ರಾಜಬೀದಿಯಲ್ಲಿ ದಸರಾ ಗಜಪಡೆಯ ತಾಲೀಮು ಕೂಡ ಆರಂಭವಾಗಲಿದೆ. ಕಾಡಿನಲ್ಲಿ ಸ್ವಾಭಾವಿಕವಾಗಿ ಸಿಗುವ ಆಹಾರ ಸೇವಿಸುತ್ತಿದ್ದ ಆನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಇದರಿಂದ ಸಹಜವಾಗಿ ದಸರಾ ಆನೆಗಳ ತೂಕ ಹೆಚ್ಚಾಗುತ್ತದೆ.
ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಲಾರಿಗಳನ್ನು ತೂಕ ಮಾಡುವ ವೇ ಬ್ರಿಡ್ಜ್‌ನಲ್ಲಿ ದಸರಾದ ಗಜಪಡೆಯ ಮೊದಲ ತಂಡದ 9 ಆನೆಗಳ ತೂಕ ದಾಖಲಿಸಲಾಯಿತು. ಚಿನ್ನದ ಅಂಬಾರಿ ಹೊರುವುದು ಅಭಿಮನ್ಯುವೇ ಆದರೂ, ತೂಕದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ. ಅಭಿಮನ್ಯುವನ್ನೇ ಮೀರಿಸುವಂತೆ ಅರ್ಜುನ 5,560 ಕೆ.ಜಿ ತೂಕ ಹೊಂದಿದ್ದಾನೆ. ಎರಡನೇ ಸ್ಥಾನದಲ್ಲಿ ಅಭಿಮನ್ಯು 4,770 ಕೆ.ಜಿ ತೂಕ ಹೊಂದಿದ್ದಾನೆ.
ಇನ್ನುಳಿದಂತೆ, ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿರುವ ಮಹೇಂದ್ರ ಆನೆ 4,250 ಕೆ.ಜಿ ಹೊಂದಿದ್ದರೆ, ಭೀಮಾ 3,920 ಕೆ.ಜಿ ಇದ್ದಾನೆ. ಇನ್ನು, ಧನಂಜಯ 4,810 ಕೆ.ಜಿ, ಗೋಪಾಲಸ್ವಾಮಿ 5,140 ಕೆ.ಜಿ, ಕಾವೇರಿ 3,100 ಕೆ.ಜಿ, ಲಕ್ಷ್ಮೀ 2,920 ಕೆ.ಜಿ, ಚೈತ್ರ 3,050 ಕೆ.ಜಿ ತೂಕ ಹೊಂದಿವೆ. ಈ ಎಲ್ಲಾ ಆನೆಗಳನ್ನು ದಸರಾ ಜಂಬೂ ಸವಾರಿ ಸಮೀಪಿಸುತ್ತಿದ್ದಂತೆ ಮತ್ತೆ ತೂಕ ಮಾಡಲಾಗುತ್ತದೆ. ಆಗ ಎಲ್ಲಾ ಆನೆಗಳು ಕಡಿಮೆ ಎಂದ್ರೂ 500 ಕೆ.ಜಿ ತೂಕ ಹೆಚ್ಚಿಸಿಕೊಳ್ಳಲಿವೆ.
ಒಟ್ಟಾರೆ, ದಸರಾ ಗಜಪಡೆಗೆ ಅರಮನೆಯಂಗಳದಲ್ಲಿ ತಾಲೀಮು ಆರಂಭಿಸಲಿದ್ದು, 14 ನೇ ತಾರೀಖಿನಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರತಿದಿನ ತಾಲೀಮು ನಡೆಯಲಿದೆ. ಆ ಮೂಲಕ ಮೈಸೂರಿನಲ್ಲಿ ದಸರಾ ವೈಭವ ಮತ್ತಷ್ಟು ಕಳೆಗಟ್ಟಲಿದೆ.
ಸುರೇಶ್ ಬಿ ಪವರ್ ಟಿವಿ ಮೈಸೂರು