ಕೊಪ್ಪಳ : ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಒಳಹರಿವು ಹೆಚ್ಚಿದೆ. ಹೀಗಾಗಿ ಜಲಾಶಯದ 32 ಕ್ರಸ್ಟ್ ಗೇಟ್‌ಗಳನ್ನು ತೆರೆದು ಸುಮಾರು 1.80 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ನದಿಯ ವ್ಯಾಪ್ತಿಯಲ್ಲಿ ಪ್ರವಾಹ ಹೆಚ್ಚಳವಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಇರುವ ಸ್ಮಾರಕಗಳು ಜಲಾವೃತವಾಗಿವೆ.
ಡ್ಯಾಂನಿಂದ 1.80 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯಕ್ಕೆ 1.85 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆನೆಗೊಂದಿ ವ್ಯಾಪ್ತಿಯಲ್ಲಿ ಶ್ರೀಕೃಷ್ಣದೇವರಾಯ ಸಮಾಧಿ, ಸಾಲುಮಂಟಪ, ಹುಚ್ಚಪ್ಪಯ್ಯ ಮಂಟಪ ಸೇರಿದಂತೆ ಅನೇಕ ಸ್ಮಾರಕಗಳು ಮುಳುಗಡೆಯಾಗಿವೆ.
ನೀರು ಬಿಡುಗಡೆ ಹಿನ್ನಲೆ ಕಾರಟಗಿ ತಾಲೂಕಿನ ಸಿದ್ದಾಪೂರ, ಕುಂಟೋಜಿ, ಜಮಾಪೂರ, ಉಳೇನೂರ ಬಳಿ ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಜಮೀನಿನಲ್ಲಿದ್ದ ಪಂಪ್ ಸೆಟ್ಗಳು ನೀರಿನಲ್ಲಿ ಮುಳುಗಡೆಯಾಗಿವೆ.