ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಕಳೆದ 7ನೇ ತಾರೀಕು ಮೈಸೂರಿನ ಅರಣ್ಯಭವನಕ್ಕೆ ಕರೆತರಲಾಗಿತ್ತು. ಮೂರು ದಿನಗಳು ಅಶೋಕಪುರಂನ ಅರಣ್ಯ ಭವನದಲ್ಲಿ ವಾಸ್ತವ್ಯವಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದ್ವು. ಕಾಡಿನಿಂದ ನಾಡಿಗೆ ಬಂದ ಟೀಂ ಅಭಿಮನ್ಯುಗೆ ಅರಮನೆಯ ಜಯಮಾರ್ತಾಂಡ ಧ್ವಾರದಲ್ಲಿ ಸಾಂಪ್ರದಾಯಿಕವಾಗಿ ಹೃದಯ ಸ್ಪರ್ಶಿ ಸ್ವಾಗತ ಕೋರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಗಜಪಡೆಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು.
ಮಂಗಳವಾಧ್ಯ ಹಾಗೂ ಪೊಲೀಸ್ ವಾದ್ಯದ ಹಿಮ್ಮೇಳದ ಜೊತೆಗೆ ವೇದ ಘೋಷಗಳೊಂದಿಗೆ ದಸರಾ ಆನೆಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಡೊಳ್ಳು ಕುಣಿತ, ನಗಾರಿ ಸೇರಿದಂತೆ ಜಾನಪದ ಕಲಾತಂಡಗಳ ಪ್ರದರ್ಶನ ಸ್ವಾಗತ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಅಭಿಮನ್ಯು ಜೊತೆಗೆ ಗೋಪಾಲಸ್ವಾಮಿ, ಮಹೇಂದ್ರ, ಅರ್ಜುನ, ಭೀಮ, ಧನಂಜಯ, ಕಾವೇರಿ, ಚೈತ್ರಾ ಹಾಗೂ ಲಕ್ಷ್ಮಿ ಆನೆಗಳು ಅರಮನೆಯತ್ತ ಹೆಜ್ಜೆ ಹಾಕಿದವು. ಅರಮನೆಯ ಪ್ರವೇಶ ಧ್ವಾರದಲ್ಲಿ ದಸರಾ ಗಜಪಡೆಗೆ ಮಂಗಳಾರತಿ ಮಾಡಿ ಮತ್ತೊಮ್ಮೆ ಪೂಜೆ ಸಲ್ಲಿಸಲಾಯಿತು.
ಕಳೆದ ಎರಡು ವರ್ಷಗಳು ಕೊವಿಡ್‌ನಿಂದಾಗಿ ಸರಳವಾಗಿ ಆಚರಿಸಲಾಗಿದ್ದ ವಿಶ್ವವಿಖ್ಯಾತ ದಸರಾ ಈ ಬಾರಿ ಅದ್ದೂರಿಯಾಗಿ ನಿರ್ವಿಘ್ನವಾಗಿ ನೆರವೇರಲಿ ಅಂತಾ ವಿಘ್ನ ನಿವಾರಕ ಗಣೇಶನನ್ನು ಬೇಡಲಾಯಿತು.
ಹರೀಶ್ ಜೊತೆ ಸುರೇಶ್ ಬಿ.ಪವರ್ ಟಿವಿ ಮೈಸೂರು