ವಿಜಯನಗರ : ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿಯಿರೋ ಜಲಾಶಯದಿಂದ 1 ಲಕ್ಷ 52 ಸಾವಿರದ 403 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ನದಿಗೆ ನೀರು ಹರಿಸಿರೋ ಪರಿಣಾಮ ವಿಶ್ವವಿಖ್ಯಾತ ಹಂಪಿಯ ಸ್ನಾನ ಘಟ್ಟ, ವಿಧಿ- ವಿಧಾನ ಮಂಟಪಗಳು ಭಾಗಶಃ ಮುಳುಗಡೆಯಾಗಿವೆ.
ಕೊದಂಡರಾಮ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ. ಜಲಾಶಯದ ಒಟ್ಟು 33 ಕ್ರೆಸ್ಟ್ ಗೇಟ್ ಗಳಲ್ಲಿ, 25 ಗೇಟ್ ಗಳನ್ನು 3.50 ಅಡಿ ಎತ್ತರಿಸಿ, 8 ಗೇಟ್ ಗಳನ್ನು 1 ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಗಿದೆ. ಇನ್ನು ಒಂದೂವರೆ ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ನದಿಗೆ ಹರಿಬಿಟ್ಟಿರುವುದರಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಸುಮಾರು 2 ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಂಪ್ಲಿ ಸೇತುವೆ ಮುಳುಗಡೆಯಾದ ಪರಿಣಾಮ ಈ ಭಾಗವಾಗಿ ಇದ್ದ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆಯ ಎರಡೂ ಬದಿಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನಿಟ್ಟು ಯಾರಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ. ಕಂಪ್ಲಿ ಹಾಗೂ ಗಂಗಾವತಿ ನಡುವೆ ಇರುವ ಸೇತುವೆ ಇದಾಗಿದೆ. ನದಿ ಪಾತ್ರಕ್ಕೆ ಜನ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನದಿ ಪಾತ್ರದಲ್ಲಿರುವ ದೇಗುಲ ಹಾಗೂ ಮೀನುಗಾರರ ಕುಟುಂಬಗಳು ಜಲಾವೃತವಾಗಿವೆ.