ಬೆಂಗಳೂರು : ಒಂದು ಕಡೆ ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರದ ಪ್ರತಿಮೆ. ಮತ್ತೊಂದು ಕಡೆ ಮಂತ್ರಾಲಯ ಮಹಾತ್ಮೆಯ ಪ್ರತಿಮೆ.. ಇದೆಲ್ಲದ್ರ ನಡುವೆ ಸಿರಿ ಧಾನ್ಯಗಳಿಂದ ನಿರ್ಮಾಣವಾದ ಅಪ್ಪು ಭಾವ ಚಿತ್ರ. ಗ್ಲಾಸ್ ಹೌಸ್ ತುಂಬಾ ಅಪ್ಪು ನೆನಪಿನ ಘಮಲು. ಜೊತೆಯಲ್ಲಿ ಗಾಜಿನೂರಿನಲ್ಲಿರುವ ಅಣ್ಣಾವ್ರ ಮನೆಯ ಚಿತ್ರಣ. ಇವೆಲ್ಲವೂ ಕಂಡು ಬಂದಿದ್ದು ಸಸ್ಯಕಾಶಿ ಲಾಲ್ ಬಾಗ್ ನ ಫ್ಲವರ್ ಶೋನಲ್ಲಿ.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚಾರಣೆಯ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಿತು. ಅಶ್ವಿನಿ ಪುನೀತ್ ರಾಜ್ ಕುಮಾರ್, ಡಾ.ರಾಜ್ ಕುಟುಂಬದ ಸದಸ್ಯರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫ್ಲವರ್ ಶೋವನ್ನು ಉದ್ಘಾಟಿಸಿದರು. ತೋಟಗಾರಿಕೆ ಇಲಾಖೆಯ ಸಚಿವ ಮುನಿರತ್ನ ಹಾಗೂ ಚಿಕ್ಕಪೇಟೆ ವಿಧಾನಸಭಾ ಶಾಸಕ ಉದಯ್ ಬಿ.ಗರುಡಾಚಾರ್ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಮಾತನಾಡಿದ ಸಿ.ಎಂ. ಬಸವರಾಜ ಬೊಮ್ಮಾಯಿ ಇದೇ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಘೋಷಿಸಿದ್ರು.
ಇದಕ್ಕೂ ಮುನ್ನ ಅಪ್ಪು ಸಮಾಧಿಗೆ ಪೂಜೆಯನ್ನು ಸಲ್ಲಿಸಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಅಲ್ಲಿಂದ ಜ್ಯೋತಿಯನ್ನು ಲಾಲ್ ಬಾಗ್ ವರೆಗೆ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡುವುದರ ಮೂಲಕ ತೆಗೆದುಕೊಂಡು ಬಂದರು. ಬೆಳ್ಳಿರಥದ ಮೆರವಣಿಗೆ ಜೊತೆಗೆ ಸೈಕಲ್ ಜಾಥಾವನ್ನೂ ಹಮ್ಮಿಕೊಂಡಿದ್ದರು. ಇನ್ನೂ ಅಪ್ಪು ಮನೆ ಎದುರು ಸೈಕಲ್ ಸೆಲ್ಯೂಟ್ ಸಲ್ಲಿಸಿದ ಅಭಿಮಾನಿಗಳು ಮನೆಯಲ್ಲಿರುವ ಫೋಟೊಗೆ ಪುಷ್ಪಾರ್ಚನೆ ಸಲ್ಲಿಸಿದರು. ವಿ ಲವ್ ಅಪ್ಪು ಎಂದು ಅಭಿಮಾನದಿಂದ ಕೂಗಿದ್ರು.
ಇನ್ನು, ಕಾರ್ಯಕ್ರಮ ಉದ್ಘಾಟನೆಯಾದ ನಂತರ ಶಿವಣ್ಣ ದುಃಖದಲ್ಲಿಯೇ ಮಾತನಾಡಿದರು. ಅಪ್ಪು ಯಶಸ್ಸು ಆತನ ಜೀವನದ ಹೇಳಿಕೆಗೆ ನಿಲುಕದ್ದು ಎಂದ ಶಿವಣ್ಣ, ಅಪ್ಪ-ಅಮ್ಮ ಮತ್ತು ಅಪ್ಪು ಸದಾ ಜೊತೆಯಲ್ಲಿಯೇ ಇರ್ತಾರೆ ಅಂದರು. ಇನ್ನೂ ರಾಘಣ್ಣ ಕೂಡಾ ಗದ್ಗದಿತರಾದರು. ನೋವು ಖುಷಿ ಎಲ್ಲವೂ ಮಿಶ್ರವಾಗಿದೆ ಎಂದ ರಾಘಣ್ಣ ಅದ್ಭುತವಾಗಿ ಫಲಪುಷ್ಪ ಪ್ರದರ್ಶನ ಮಾಡಿದ್ದಾರೆ. ವರ್ಣಿಸಲು ಅಸಾಧ್ಯವೆಂದರು.
ಇದೇ ವೇಳೆ ಹೂಗಳಿಂದ ಅಲಂಕೃತಗೊಂಡ ಪುನೀತ್ ನೋಡಲು ಬಂದ ಅಭಿಮಾನಿಗಳು ಅಪ್ಪುವನ್ನು ನೆನೆದರು. ವಯಸ್ಸಿನ ಭೇದ ಭಾವ ಇಲ್ಲದೆ ಹಾಡನ್ನು ಹಾಡಿ ಅಪ್ಪು ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು. ಇದಕ್ಕೆಲ್ಲ ಬೇಕಾದ ವ್ಯವಸ್ಥೆಯನ್ನು ತೋಟಗಾರಿಕಾ ಇಲಾಖೆ ಅಚ್ಚುಕಟ್ಟಾಗಿ ನೆರವೇರಿಸಿತ್ತು.
ಇನ್ನೂ ಹನ್ನೊಂದು ದಿನಗಳ ಕಾಲ ನಡೆಯಲಿರುವ ಈ ಫ್ಲವರ್ ಶೋದಲ್ಲಿ ಕಬ್ಬನ್ ಪಾರ್ಕ್- ಊಟಿ ಸಸ್ಯತೋಟ ಸೇರಿ ದೇಶ-ವಿದೇಶಗಳಿಂದ ತರಿಸಿ ಅಲಂಕಾರವನ್ನು ಮಾಡಲಾಗಿದ್ದು,15 ಲಕ್ಷಕ್ಕೂ ಅಧಿಕ ಜನ ಈ ಪ್ರದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಇನ್ನೂ ಪಾರ್ವತಮ್ಮ ರಾಜ್‌ಕುಮಾರ್, ಡಾ.ರಾಜ್ ಕುಮಾರ್ ನಡುವೆ ಇರುವ ಪುನೀತ್ ಪ್ರತಿಮೆ ಈ ಫಲಪುಷ್ಪ ಪ್ರದರ್ಶನದ ರಂಗನ್ನು ಇನ್ನೂ ಹೆಚ್ಚಿಸಿದೆ. ಭಿನ್ನ ವಿಭಿನ್ನವಾದ ಹೂ ಎಲ್ಲರನ್ನೂ ಸಸ್ಯಕಾಶಿಗೆ ಕೈಬೀಸಿ ಕರೆಯುತ್ತಿವೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು