ಮಂಗಳೂರು : ಸರಣಿ ಕೊಲೆಗಳಾಗಿ ವಾರ ಕಳೆಯುತ್ತಾ ಬಂದರೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಸಿ ಆರಿಲ್ಲ. ದ್ವೇಷದ ಕಿಡಿ ಹೊಗೆಯಾಡುತ್ತಲೇ ಇದ್ದು, ಇದನ್ನು ಮನಗಂಡ ಎಡಿಜಿಪಿ ಅಲೋಕ್ ಕುಮಾರ್, ಮೂರು ದಿನಗಳ ಅಂತರದಲ್ಲಿ ಮತ್ತೆ ಮಂಗಳೂರಿಗೆ ಆಗಮಿಸಿದ್ದಾರೆ. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಪ್ರಮುಖ ಪೊಲೀಸ್ ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ. ಅಲ್ಲದೆ, ಕೋಮು ವೈಷಮ್ಯದ ಜ್ವಾಲೆಯನ್ನು ಹತ್ತಿಕ್ಕಲು ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಆಗಸ್ಟ್ 5ರಿಂದಲೇ ಜಾರಿಗೆ ಬರುವಂತೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಹೋಗುವುದನ್ನು ನಿಷೇಧ ಮಾಡಲಾಗಿದೆ. ಒಂದು ವಾರ ಅಥವಾ ಹತ್ತು ದಿನಗಳವರೆಗೆ ಈ ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಡಿಜಿಪಿ ತಿಳಿಸಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ಈ ಕ್ರಮದಿಂದ ವಿನಾಯ್ತಿ ಇರಲಿದೆ. ಹಿಂಬದಿ ಸವಾರರಾಗಿ ಬಂದು ಅಪರಾಧ ಎಸಗುವ ಸಾಧ್ಯತೆ ಇರುವುದರಿಂದ ಪುರುಷರು ಡಬಲ್ ರೈಡ್ ಹೋಗುವುದನ್ನೇ ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದಲ್ಲದೆ, ಎರಡು ಜಿಲ್ಲೆಗಳಲ್ಲಿ 2015ರ ನಂತರದ ಕೋಮು ಗಲಭೆ, ಕೋಮು ದ್ವೇಷದ ಕೊಲೆ, ಇನ್ನಿತರ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಬೇಕು. ಕೋರ್ಟಿನಲ್ಲಿದ್ದರೆ, ಯಾರು ಬೆಂಬಲಕ್ಕಿದ್ದಾರೆ ಅನ್ನೋದನ್ನು ಪತ್ತೆ ಮಾಡಬೇಕು. ಪದೇ ಪದೇ ಇಂತಹ ಪ್ರಕರಣಗಳಲ್ಲಿ ತೊಡಗಿಸಿದ್ದರೆ, ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಬೇಕು. ನಾಪತ್ತೆಯಾಗಿದ್ದರೆ, ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಫಾಜಿಲ್ ಕೊಲೆ ಹಿನ್ನೆಲೆಯಲ್ಲಿ ವೈಷಮ್ಯ ಬಿಗಡಾಯಿಸಿರುವ ಸುರತ್ಕಲ್ ಪ್ರದೇಶಕ್ಕೆ ತೆರಳಿದ ಎಡಿಜಿಪಿ ಅಲೋಕ್ ಕುಮಾರ್, ಅಲ್ಲಿ ಸಾರ್ವಜನಿಕರ ಜೊತೆ ಮಾತುಕತೆ ನಡೆಸಿದ್ದು, ಪೊಲೀಸರೊಂದಿಗೆ ಸಂವಹನ ನಡೆಸಿ, ಅಲರ್ಟ್ ಇರುವಂತೆ ಸೂಚಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿಯಿದೆ, ಇದರ ಹಿಂದಿರುವ ತಂಡದ ಬಗ್ಗೆಯೂ ಗೊತ್ತಿದೆ. ಯಾರು ಹೊಡೆದು ಹೋಗಿದ್ದಾನೆ, ಆತನ ಬಗ್ಗೆಯೂ ಗೊತ್ತು. ನಾವು ಅವರನ್ನು ಹಿಡಿದೇ ಹಿಡಿತೇವೆ ಎಂದು ಎಡಿಜಿಪಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣ ಎನ್ಐಎ ತಂಡಕ್ಕೆ ಹಸ್ತಾಂತರ ಆದ್ರೂ ಕರ್ನಾಟಕ ಪೊಲೀಸರು ಆರೋಪಿಗಳನ್ನು ಹಿಡಿಯದೇ ಬಿಡಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ಸುರತ್ಕಲ್‌ನಲ್ಲಿ ಕೊಲೆಯಾದ ಫಾಜಿಲ್ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ಪಡೆಯಲಾಗಿದೆ. ಕೃತ್ಯದ ಹಿಂದೆ ಯಾರಿದ್ದಾರೆ, ಅವರಿಗೆ ಯಾರು ಸಾಥ್ ನೀಡಿದ್ದರು, ಯಾರೆಲ್ಲಾ ಬೆಂಬಲ ಇದ್ದಾರೆ ಎನ್ನೋದನ್ನು ಪತ್ತೆ ಮಾಡುತ್ತೀವಿ. ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಎಡಿಜಿಪಿ ಉತ್ತರಿಸಿದ್ದಾರೆ. ಅಲೋಕ್ ಕುಮಾರ್ ಸುರತ್ಕಲ್ ಭೇಟಿಯಾದ ವೇಳೆ ಸ್ವತಃ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ಖಡಕ್ ಅಧಿಕಾರಿಯೆಂದು ಹೆಸರಾಗಿರುವ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿಗೆ ಬಂದು ಪೊಲೀಸ್ ವ್ಯವಸ್ಥೆಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ, ಕೋಮು ವೈಷಮ್ಯದ ನೆಲದಲ್ಲಿ ಮತ್ತಷ್ಟು ಕಠಿಣ ಕ್ರಮ ಜರುಗಿಸಲು ಸೂಚನೆಯನ್ನೂ ನೀಡಿದ್ದಾರೆ.