ಶಿವಮೊಗ್ಗ: ಸಿದ್ಧರಾಮಯ್ಯ ಆರ್.ಎಸ್.ಎಸ್. ಕಾರ್ಯಕರ್ತರ ಪಾದದ ಧೂಳಿಗೂ ಸಮ ಅಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಕಿಡಿಕಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ಆರ್.ಎಸ್.ಎಸ್. ಕುರಿತು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಹಗುರವಾಗಿ ಮಾತನಾಡಿದ್ದಾರೆ. ತಮ್ಮ ತೆವಲಿಗಾಗಿ ಆರ್.ಎಸ್.ಎಸ್. ದೂರಿದ್ದಾರೆ. ಆರ್.ಎಸ್.ಎಸ್. ಬಗ್ಗೆ ಅವರಿಗೇನು ಗೊತ್ತು. ಅವರು ಒಮ್ಮೆ ಶಾಖೆಗೆ ಬರಲಿ. ನಾನೇ ಕರೆದುಕೊಂಡು ಹೋಗುತ್ತೇನೆ. ಆಮೇಲೆ ಮಾತನಾಡಲಿ ಎಂದು ಗರಂ ಆದರು.
ಆರ್.ಎಸ್.ಎಸ್. ಎಂಬುದು ಸ್ವಾಭಿಮಾನ ಕಲಿಸಿದೆ. ದೇಶಾಭಿಮಾನ ಬೆಳೆಸಿದೆ. ಮೊದಲು ಆರ್.ಎಸ್.ಎಸ್. ಸ್ವಯಂಸೇವಕರ ಬಗ್ಗೆ ತಿಳಿದುಕೊಳ್ಳಲಿ. ಅವರಿಗೆ ಆ ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲ. ಈ ದೇಶದ ಆಶಾಕಿರಣವೇ ಆರ್.ಎಸ್.ಎಸ್., ಇಲ್ಲಿ ಕಾಂಗ್ರೆಸ್ನಲ್ಲಿರುವಂತೆ ಗುಂಪುಗಾರಿಕೆ ಇಲ್ಲ. ಸಿದ್ಧರಾಮಯ್ಯ ತಕ್ಷಣವೇ ಕ್ಷಮೆ ಕೇಳಬೇಕು. ಕಾಂಗ್ರೆಸ್ ನಲ್ಲಿ ಈಗಾಗಲೇ ಗುಂಪುಗಾರಿಕೆ ಮಿತಿ ಮೀರಿದೆ. ಒಕ್ಕಲಿಗರು, ಕುರುಬರು ಎಂದು ಜಾತಿಯ ಆಧಾರದ ಮೇಲೆ ಕಾಂಗ್ರೆಸ್ ನವರು ಬೆಳೆಯಲು ಹೊರಟಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ಸರ್ಕಾರ ಹತ್ಯೆಕೋರರನ್ನು ಕೇವಲ 24 ಗಂಟೆಯೊಳಗೆ ಬಂಧಿಸಿದೆ. ಸಿದ್ಧರಾಮಯ್ಯ ಸರ್ಕಾರದಲ್ಲಿ 32 ಜನ ಹಿಂದೂ ಕಾರ್ಯಕರ್ತರ ಕೊಲೆಯಾಯಿತಲ್ಲ. ಆಗ ಅವರು ರಾಜೀನಾಮೆ ಕೊಟ್ಟಿದ್ರಾ ಅಂತಾ ಪ್ರಶ್ನಿಸಿದ್ದಾರೆ. ಅವರು ರಾಜೀನಾಮೆ ಕೇಳಲು ಅರ್ಥವೇ ಇಲ್ಲ ಎಂದು ಈಶ್ವರಪ್ಪ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನವರು ಬಳಸುವ ಭಾಷೆ ನೋಡಿದರೆ ರಕ್ತ ಕುದಿಯುತ್ತದೆ. ಪತ್ರಿಕೆಗಳನ್ನು ಓದುತ್ತಾ ಹೋದರೆ ಕಾಂಗ್ರೆಸ್ ವಿರುದ್ಧವೇ ಇಡೀ ದಿನ ಪತ್ರಿಕಾಗೋಷ್ಠಿ ಮಾಡಬಹುದು. ಶೇಕಡ 80 ರಷ್ಟು ಇರುವ ಹಿಂದೂಗಳ ದೇಶದಲ್ಲಿ ಶೇಕಡ 20 ರಷ್ಟು ಇರುವ ಮುಸ್ಲಿಮರು ಕೊಲೆ ಮಾಡುತ್ತಾರೆ ಎಂದರೆ ಆಕ್ರೋಶ ಬಾರದೇ ಇರುವುದೇ? ಇದರ ಹಿಂದೆ ಕಾಂಗ್ರೆಸಿಗರು ಇದ್ದಾರೆ ಎಂಬುದು ಅಷ್ಟೇ ಸತ್ಯ. ರಾಷ್ಟ್ರದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಲೇ ಬಂದಿದೆ ಎಂದು ಟೀಕಿಸಿದರು.
ಇನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಅವರಿಗೇಕೆ ಪತ್ರಕರ್ತರ ಮೇಲೆ ಸಿಟ್ಟು? ಇದು ಗೂಂಡಾಗಿರಿಯಲ್ಲವೇ? ತಕ್ಷಣವೇ ರಮೇಶ್ ಕುಮಾರ್ ಅವರನ್ನು ಬಂಧಿಸಬೇಕೆಂದು ಸಿ.ಎಂ. ಬೊಮ್ಮಾಯಿ ಅವರಿಗೆ ಆಗ್ರಹಿಸುತ್ತೆನೆ ಎಂದು ಈಶ್ವರಪ್ಪ ಹೇಳಿದ್ದಾರೆ.