ಬೆಂಗಳೂರು: ಪಕ್ಷದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದರು.
ಪ್ರವೀಣ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಲವರ ಜೊತೆ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದ್ದೇವೆ. ನಿನ್ನೆ ದುಃಖ ಮತ್ತು ಭಾವನೆ ಹೊರಹಾಕುವ ಸಂದರ್ಭದಲ್ಲಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಸಹಜವಾಗಿ ಕಾರ್ಯಕರ್ತರಿಗೆ ಆಕ್ರೋಶ ಇರುತ್ತದೆ ಎಂದರು.
ಇನ್ನು ನಮ್ಮ ಹೋರಾಟ ಏನಿದ್ದರೂ ಜಿಹಾದಿಗಳ ವಿರುದ್ಧ. ಜಿಹಾದಿ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಆಗುತ್ತಿದೆ. ಇಂತಹ ಶಕ್ತಿಗಳ ದಮನಕ್ಕೆ ಎಲ್ಲರೂ ಒಂದಾಗಬೇಕಿದೆ. ರಾಜೀನಾಮೆ ಕೊಟ್ಟಿರುವ ಕಾರ್ಯಕರ್ತರ ಜೊತೆ ಈಗಾಗಲೇ ನಾವು ಮಾತಾಡಿದ್ದೇವೆ. ಕಾರ್ಯಕರ್ತನನ್ನು ನಾವು ಕಳೆದುಕೊಂಡಿದ್ದು, ಈ ಸಾವಿಗೆ ಸರ್ಕಾರದಿಂದ ತಕ್ಕ ಉತ್ತರ ಕೊಡುತ್ತೇವೆ, ತನಿಖೆ ಪೂರ್ಣವಾಗಿ ಆಗಲಿ. ಏನೇನೋ ಮಾತಾಡಿ ತನಿಖೆಯು ದಾರಿ ತಪ್ಪಿಸೋದು ಬೇಡ ಎಂದು ಮನವಿ ಮಾಡಿದರು.
ಅಲ್ಲದೇ ಇದರ ಹಿಂದೆ ಪಿಎಫ್‌ಐ ಕೈವಾಡ ಕಂಡುಬರುತ್ತಿದೆ. ಪಿಎಫ್‌ಐ ನಿಯಂತ್ರಣ ಮತ್ತು ನಿಷೇಧದ ವಿಚಾರ ಕೇಂದ್ರ ಸರ್ಕಾರದ ಮುಂದಿದೆ. ಅದಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಕೇಂದ್ರ ಕೈಗೊಳ್ಳಲಿದೆ. ಆದರೂ ನಾವು ಪಿಎಫ್‌ಐ ನಿಷೇಧಿಸಲು ಒತ್ತಾಯಿಸುವುದಾಗಿ ತಿಳಿಸಿದರು.