ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಪದೇ ಪದೇ ಕಾರ್ಮೋಡ ಆವರಿಸ್ತಿದೆ. ಪಕ್ಷದ ವೇದಿಕೆಯಲ್ಲಿ ಸಮಾರಂಭ ಮಾಡ್ತೀವಿ ಎನ್ನುತ್ತಿದ್ದ ಸಿದ್ದು ಬೆಂಬಲಿಗರಿಗೆ, ಡಿಕೆಶಿ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಕೈ ನಾಯಕರ ನಡುವಿನ ಕಲಹ, ಮತ್ತೊಮ್ಮೆ ಸ್ಪೋಟಗೊಂಡಿದೆ. ಕಾರ್ಯಕ್ರಮವನ್ನ ಹೈಜಾಕ್ ಮಾಡುವ ಪ್ರಯತ್ನಗಳೂ ನಡೀತಿವೆ. ಈ ನಡುವೆ ಸಿದ್ದು ಅಂಡ್ ಟೀಂ ವಿರುದ್ದ ಎಐಸಿಸಿ ನಾಯಕರು ಗರಂ ಆಗಿದ್ದಾರೆ.
ಸಿದ್ದರಾಮೋತ್ಸವಕ್ಕೆ ಪದೇ ಪದೇ ವಿಘ್ನಗಳು ಎದುರಾಗ್ತಾನೇ ಇದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇ.ಡಿ ಇಕ್ಕಟ್ಟಿನಿಂದ ಹೊರಗೆ ಬರೋಕೆ ಆಗ್ತಿಲ್ಲ. ಹೈಕಮಾಂಡ್ ನಾಯಕರಿಗೆ ಇ.ಡಿ ಉರುಳು ಮತ್ತಷ್ಟು ಬಿಗಿಯಾಗೋ ಸಾಧ್ಯತೆಗಳೂ ಹೆಚ್ಚುತ್ತಿದೆ. ಹೀಗಿರುವಾಗ ಪಕ್ಷದಲ್ಲಿ ವ್ಯಕ್ತಿ ಪೂಜೆ ಬೇಕಾ? ಪಕ್ಷಕ್ಕೆ ಆಪತ್ತು ಎದುರಾಗಿರುವಾಗ ಸಿದ್ದರಾಮೋತ್ಸವದ ಜಪ ಮಾಡಬೇಕಾ ಅಂತಾ ಎಐಸಿಸಿ ನಾಯಕರು ಗರಂ ಆಗಿದ್ದಾರೆ. ಈ ಮೂಲಕ ಅದ್ದೂರಿ ಸಿದ್ದರಾಮೋತ್ಸವದಲ್ಲಿ ಬ್ಯುಸಿಯಾದವರಿಗೆ ಹೈಕಮಾಂಡ್ ಭರ್ಜರಿ ಶಾಕ್ ನೀಡಿದೆ.
ಸಿದ್ದರಾಮೋತ್ಸವ ವಿರುದ್ಧ ಕೆರಳಿದ ಕನಕಪುರ ಬಂಡೆ :
ಇಷ್ಟು ದಿನ ಪಕ್ಷದ ವೇದಿಕೆಯಲ್ಲೇ ಸಿದ್ದರಾಮಯ್ಯ ಹುಟ್ಟುಹಬ್ಬದ ಸಮಾರಂಭ ಮಾಡ್ತೀವಿ ಎನ್ನುತ್ತಿದ್ದ ಡಿಕೆಶಿ, ಕಾಂಗ್ರೆಸ್ ಭವನದಲ್ಲಿ ಮಾತನಾಡ್ತಾ, ಆಗಸ್ಟ್ ಮೂರನೇ ತಾರೀಖು ನಡೆಯೋದು ಖಾಸಗಿ ಕಾರ್ಯಕ್ರಮ.. ಅದು ಅಭಿಮಾನಿಗಳ ಕಾರ್ಯಕ್ರಮ.. ಆಗಸ್ಟ್ 15 ರಂದು ನಡೆಯೋದು ರಾಷ್ಟ್ರ ಕಾರ್ಯಕ್ರಮ.. ಎಲ್ಲಾ ಕಾರ್ಯಕರ್ತರು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳ ನೋಂದಣಿ ಮಾಡಿಸಿ ಕರೆದುಕೊಂಡು ಬರಬೇಕು ಅಂತಾ ಪಟಾಕಿಯಂತೆ ಸಿಡಿದ್ರು.
ಇನ್ನೂ ಇಡೀ ಮುಸ್ಲಿಂ ಸಮುದಾಯವನ್ನ ಸಿದ್ದರಾಮಯ್ಯ ಹಿಂದೆಯೇ ಕರೆದುಕೊಂಡು ಹೋಗೋ ಕೆಲಸಕ್ಕೆ ಜಮೀರ್ ಕೈ ಹಾಕಿದ್ದಾರೆ. ಇದು ಡಿಕೆಶಿ ಅಂಡ್ ಟೀಂಗೆ ಸಹಿಸಲಾಗ್ತಿಲ್ಲ. ಪಕ್ಷದ ಮುಂಚೂಣಿ ನಾಯಕರ ಈ ನಡವಳಿಕೆಯಿಂದ ಇತರ ಮುಖಂಡರೂ ಕೆರಳಿದ್ದಾರೆ. ಮೊದಲು 113 ಕ್ಷೇತ್ರಗಳನ್ನ ಗೆದ್ದುಕೊಂಡು ಬರಬೇಕು. ಆ ಮೇಲೆ ಸಿಎಂ ಯಾರಾಗಬೇಕು ಅಂತಾ ಮಾತಾಡಿ. ಅಲ್ಲಿವರೆಗೂ ಸುಮ್ಮನೆ ಇರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕೂಡ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ರು.
ಒಟ್ನಲ್ಲಿ ಟಗರು-ಬಂಡೆ ಕಾಳಗಕ್ಕೆ ಬ್ರೇಕ್ ಬೀಳೋ ಲಕ್ಷಣಗಳೇ ಕಾಣ್ತಿಲ್ಲ. ಇನ್ನು, ಇಡಿ ಡ್ರಿಲ್ ಮುಂದುವರೆದ್ರೆ ರಾಹುಲ್ ಗಾಂಧಿಯನ್ನ ಕರೆತರೋ ಕನಸು ಭಗ್ನವಾಗಲಿದೆ. ಇಷ್ಟೆಲ್ಲಾ ಅಡ್ಡಿ, ಆತಂಕ, ಜಟಾಪಟಿ ನಡುವೆ ಸಿದ್ದರಾಮೋತ್ಸವಕ್ಕೆ ಇನ್ನಿಲ್ಲದ ತಯಾರಿ ನಡೀತಿದೆ. ಸಮಾರಂಭದ ಬಳಿಕ ಕೈ ಕಲಹ ಶಮನವಾಗುತ್ತೋ ಅಥವಾ ಮತ್ತಷ್ಟು ಸ್ಪೋಟಗೊಳ್ಳುತ್ತೋ ಕಾದು ನೋಡಬೇಕಿದೆ.
ಆನಂದ್ ನಂದಗುಡಿ, ಸ್ಪೆಷಲ್ ಕರೆಸ್ಪಾಂಡೆಂಟ್, ಪವರ್ ಟಿವಿ