ರಾಜಸ್ಧಾನ : ಭಾರಿ ಮಳೆಯಿಂದ ರಾಜಸ್ಥಾನದ ಜೋಧ್‌ಪುರ, ಭಿಲ್ವಾರಾ ಮತ್ತು ಚಿತ್ತೋರ್‌ಗಢ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ಮತ್ತು ರೈಲು ಹಳಿಗಳು ಜಲಾವೃತವಾಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಜೋಧ್‌ಪುರದಲ್ಲಿ ಮಳೆ ನೀರಿನಿಂದ ತುಂಬಿದ್ದ ಹೊಂಡದಲ್ಲಿ ನಾಲ್ವರು ಮಕ್ಕಳು ಮುಳುಗಿ ಸಾವನ್ನಪ್ಪಿದ ದುರ್ಘಟನೆಯೂ ವರದಿಯಾಗಿದೆ.ಪ್ರತಿಕೂಲ ಹವಾಮಾನ ಮತ್ತು ಪ್ರವಾಹದಿಂದಾಗಿ ಉತ್ತರ ಪಶ್ಚಿಮ ರೈಲ್ವೆಯ ಏಳು ರೈಲುಗಳನ್ನು ರದ್ದುಗೊಳಿಸಲಾಗಿದೆ. ಆರು ರೈಲುಗಳನ್ನು ಭಾಗಶಃ ರದ್ದುಗೊಳಿಸಿದ್ದು, ಇನ್ನೆರಡು ರೈಲುಗಳನ್ನು ರಾಜಸ್ಥಾನದಿಂದ ವಾಪಸ್ ಕಳುಹಿಸಲಾಗಿದೆ.
ಇನ್ನು, ಈ ಜಿಲ್ಲೆಗಳ ಹಲವು ಪ್ರದೇಶಗಳು ಜಲಾವೃತವಾಗಿದ್ದು, ವಾಹನಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆಯೂ ವರದಿಯಾಗಿದೆ.ಘಟನೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಪೂರ್ವ ರಾಜಸ್ಥಾನದಲ್ಲಿ ಜೋರು ಮಳೆಯಾಗಲಿದೆ. ಅಜ್ಮೀರ್, ಜೋಧ್‌ಪುರ ಮತ್ತು ಉದಯ್‌ಪುರ ಜಿಲ್ಲೆಗಳಲ್ಲಿ ಇದರ ಪರಿಣಾಮ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.