ಮಂಡ್ಯ : ತಾರಕಕ್ಕೇರಿದ್ದ ಬೇಬಿಬೆಟ್ಟ ಬಡಿದಾಟದಲ್ಲಿ ಕೊನೆಗೂ ರೈತರಿಗೆ ತಾತ್ಕಾಲಿಕ ಗೆಲುವು ಸಿಕ್ಕಿದೆ. ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಸದ್ಯಕ್ಕೆ ಟ್ರಯಲ್ ಬ್ಲಾಸ್ಟ್ ನಡೆಸೋದಿಲ್ಲ ಅಂತಾ ಸ್ಪಷ್ಟಪಡಿಸಿದೆ.ಟ್ರಯಲ್ ಬ್ಲಾಸ್ಟ್‌ಗೆ ಕರೆಸಿದ್ದ ಜಾರ್ಖಂಡ್‌ನ ಭೂವಿಜ್ಞಾನ ತಜ್ಞರನ್ನು ಜಿಲ್ಲಾಡಳಿತ ವಾಪಸ್ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ KRS ಬಳಿಯ ಕಟ್ಟೇರಿ ಬಳಿ ನಡೆಯುತ್ತಿದ್ದ ರೈತರ ಹೋರಾಟವನ್ನು ವಾಪಸ್ ಪಡೆಯಲಾಗಿದೆ. ಇನ್ನೊಂದೆಡೆ ಅಧಿಕಾರಿಗಳ ಬದಲಾದ ನಿಲುವಿಗೆ ಗಣಿ ಮಾಲೀಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಟ್ರಯಲ್ ಬ್ಲಾಸ್ಟ್ ಮಾಡಲೇಬೇಕು, ಇದು ಕೋರ್ಟ್ ಆದೇಶ.ಕೋರ್ಟ್ ಆದೇಶದ ಉಲ್ಲಂಘನೆ ಸರಿಯಲ್ಲ. ಟ್ರಯಲ್ ಬ್ಲಾಸ್ಟ್ ನಡೆಸದಿದ್ರೆ ನಮಗೆ ಭಾರೀ ನಷ್ಟವಾಗಲಿದೆ. ಹೀಗಾಗಿ ಕಾವೇರಿ ಕಣಿವೆಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಅಂತಾ ಗಣಿ ಮಾಲೀಕರು & ಕಾರ್ಮಿಕರು ಎಚ್ಚರಿಸಿದ್ದಾರೆ.
ಇನ್ನೊಂದೆಡೆ ಟ್ರಯಲ್ ಬ್ಲಾಸ್ಟ್ ವಿವಾದ ಉಗ್ರ ಸ್ವರೂಪ ಪಡೆದ ಬೆನ್ನಲ್ಲೇ ಬೇಬಿ ಬೆಟ್ಟದ ಸುತ್ತಲಿನ 1,623 ಎಕರೆ ಜಾಗ ನಮ್ದು.ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ನಮ್ಮ ಅನುಮತಿ ಪಡೆಯಬೇಕಿತ್ತು. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಮೈಸೂರಿನ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.
ಇನ್ನೊಂದೆಡೆ ಟ್ರಯಲ್ ಬ್ಲಾಸ್ಟ್ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ KRS ಡ್ಯಾಂ ಈಗ ಸುರಕ್ಷತೆಯ ಭಯ ಎದುರಿಸುತ್ತಿದೆ. 2018ರಲ್ಲಿ KRS ಡ್ಯಾಂ ಸುತ್ತಮುತ್ತ ಕೇಳಿ ಬಂದ ಭಾರೀ ಶಬ್ದದಿಂದ ಆರಂಭವಾದ ಈ ಭಯ ಎನ್ನೋದು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅದನ್ನು ದೂರ ಮಾಡುವುದಕ್ಕಾಗಿಯೇ ಟ್ರಯಲ್ ಬ್ಲಾಸ್ಟ್ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ಮಾಡುವುದಕ್ಕೆ ನಿರ್ಧರಿಸಿ 2019ರಿಂದಲೂ ಪ್ರಯತ್ನಿಸುತ್ತಿದೆ. ಹೀಗೆ ಜಿಲ್ಲಾಡಳಿತ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವ ವಿಚಾರ ವಿವಾದದ ಸ್ವರೂಪ ಪಡೆದುಕೊಳ್ಳಲಾರಂಭಿಸಿತ್ತು. ಸೋಮವಾರದಿಂದ ನಡೆದ ರೈತರ ಪ್ರತಿಭಟನೆಗೆ ಬೆದರಿದ ಜಿಲ್ಲಾಡಳಿತ ಕಡೆಗೂ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನು ಮುಂದೂಡಿದೆ.
ಬೇಬಿ ಬೆಟ್ಟದ ಸಮೀಪ ಇರುವ ಕಟ್ಟೇರಿ ಗ್ರಾಮದ ಬಳಿ ರೈತರು ಪ್ರತಿಭಟನೆ ಆರಂಭಿಸಿದ್ದರು. ಸೋಮವಾರ ದಿನಪೂರ್ತಿ ಟ್ರಯಲ್ ಬ್ಲಾಸ್ಟ್ ನಡೆಸುವ ಬಗ್ಗೆ ಸ್ಪಷ್ಟವಾಗಿದ್ದ ಜಿಲ್ಲಾಡಳಿತ ಮಂಗಳವಾರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ರೈತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಅಧಿಕಾರಿಗಳ ತಂಡ, ಟ್ರಯಲ್ ಬ್ಲಾಸ್ಟ್ ಮಾಡುವುದನ್ನು ಮುಂದೂಡಲಾಗಿದೆ ಎಂದು ಘೋಷಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.
ಒಟ್ಟಾರೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಪರೀಕ್ಷೆಯ ವಿಚಾರ ಈಗ ಎರಡನೇ ಬಾರಿಗೆ ಮುಂದೂಡಲ್ಪಟ್ಟಿದೆ. ಗಣಿ ಮಾಲೀಕರು ಟ್ರಯಲ್ ಬ್ಲಾಸ್ಟ್ ಬೇಕು ಎನ್ನೋದು, ರೈತರು ಬೇಡ ಎನ್ನೋದು. ಹೀಗೆ ವಾದ ವಿವಾದದ ನಡುವೆಯೇ ಎರಡನೆ ಬಾರಿಗೆ ಮುಂದೂಡಲ್ಪಟ್ಟಿರುವ ಟ್ರಯಲ್ ಬ್ಲಾಸ್ಟ್ ವಿಚಾರ ಮತ್ತೆ ಯಾವಾಗ ಮುನ್ನೆಲೆಗೆ ಬರಲಿದೆಯೋ ಕಾದು ನೋಡಬೇಕಿದೆ.