ಕಲಬುರಗಿ : ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಟೈರ್ ಶೋರೂಮ್‌ನಲ್ಲಿರುವ ವಸ್ತುಗಳನ್ನು ಹೊತ್ತೊಯ್ದಂತಹ ಘಟನೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ. ಚಿದಾನಂದ ಸುಂಕದ್ ಎಂಬುವರ ಬಸವ ಟೈರ್ ಶೋರೂಮ್‌ನಲ್ಲಿ ಕಳ್ಳತನವಾಗಿದೆ. ಚಿಂಚೋಳಿ – ತಾಂಡೂರು ಮುಖ್ಯ ರಸ್ತೆಯಲ್ಲಿರುವ ಶೋರೂಮ್‌ಗೆ ಎಂದಿನಂತೆ ವಹಿವಾಟು ಮುಗಿದ ಬಳಿಕ ಕೀಲಿ ಹಾಕಿ ಹೋಗಲಾಗಿದೆ. ಮಧ್ಯರಾತ್ರಿ ಕಳ್ಳರ ಗುಂಪು ಎಂಟ್ರಿ ಕೊಟ್ಟು, ಸೆಕ್ಯುರಿಟಿ ಗಾರ್ಡ್ ಮೇಲೆ ನಡೆಸಿದೆ. ಬಳಿಕ ಸುಮಾರು 20 ಲಕ್ಷ ಮೌಲ್ಯದ 90ಕ್ಕೂ ಅಧಿಕ ಟೈರ್‌ಗಳನ್ನು ಲಾರಿಯಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿಂಚೋಳಿಯ ಬಸವ ಟೈರ್ಸ್ ಶೋರೂಮ್‌ನಲ್ಲಿ ಕಳೆದ ಆರು ತಿಂಗಳಲ್ಲಿ ಇದುವರೆಗೆ ಮೂರು ಬಾರಿ ಕಳ್ಳತನ ನಡೆದಿದೆ. ಮೊದಲ ಸಲ ಕಳ್ಳರು 3 ಲಕ್ಷದ ಟೈರ್‌ಗಳನ್ನು ಹೊತ್ತೊಯ್ದಿದ್ದರು. ಎರಡನೇ ಬಾರಿಯೂ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರೂ ಎನ್ನಲಾಗಿದೆ. ಪೊಲೀಸರು ಮತ್ತು ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದರೂ ಪ್ರಯೋಜನವಾಗಿರಲಿಲ್ಲ. ಇಲ್ಲಿಯವರೆಗೂ ಯಾರೊಬ್ಬರನ್ನೂ ಪೋಲಿಸರು ಅರೆಸ್ಟ್ ಮಾಡಿಲ್ಲ. ಹೀಗಾಗಿ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಚಿಂಚೋಳಿ ಪಟ್ಟಣದ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪಕ್ಕಾ ಸ್ಕೆಚ್ ಹಾಕಿ ಮೂರನೇ ಬಾರಿ ಕಳ್ಳತನ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ಕೂಡಾ ದಾಖಲಾಗಿದೆ.
ಚಿಂಚೋಳಿ ತಾಲೂಕಿನಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ನಿಶ್ಚಿಂತೆಯಿಂದ ವ್ಯಾಪಾರ ವಹಿವಾಟು ನಡೆಸಲು ಆಗುತ್ತಿಲ್ಲ ಎಂದು ವ್ಯಾಪಾರಸ್ಥರು ಚಿಂಚೋಳಿ ಠಾಣೆ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಚಿಂಚೋಳಿ ಠಾಣೆ ಪೊಲೀಸರಿಗೆ ಟೈರ್ ಕಳ್ಳರೇ ದೊಡ್ಡ ತಲೆನೋವಾಗಿದ್ದು, ಆರೋಪಿಗಳನ್ನ ಎಡೆಮುರಿ ಕಟ್ಟಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ