ಕಲಬುರಗಿ: ಆತ ಎಂದಿನಂತೆ ಜಮೀನಿನಲ್ಲಿ ಕೆಲಸ ಮಾಡೋಕೆ ಅಂತಾ ಸ್ನೇಹಿತನ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದ.. ಆದರೆ, ಮರಳಿ ಮನೆಗೆ ಬರುವಾಗ ಮಾರ್ಗಮಧ್ಯೆ ಜವರಾಯ ಕಾದು ಕುಳಿತಿದ್ದನೆಂಬ ಸಣ್ಣ ಸುಳಿವೂ ಇಲ್ಲದೇ ಹೋಗುತ್ತಿದ್ದನು. ಇನ್ನೇನು ಹಳ್ಳೆ ದಾಟುವಷ್ಟರಲ್ಲೇ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಮಗುಚಿಬಿದ್ದಿದೆ.
ಕಡಣಿ ಗ್ರಾಮದ 39 ವರ್ಷದ ಸಿದ್ದಪ್ಪ ಕೆರಮಗಿ ಮತ್ತು ಉಮೇಶ್ ಜಮೀನುವೊಂದರಲ್ಲಿ ಕೆಲಸ ಮಾಡಲು ತೆರಳಿದ್ದರು.ಆದರೆ, ಜಮೀನಿನಲ್ಲಿ ಕೆಲಸ ಮಾಡಿ ರಾತ್ರಿ 9 ಗಂಟೆ ಸುಮಾರಿಗೆ ವಾಪಸ್ ಆಗುತ್ತಿದ್ದಾಗ ಧಾರಾಕಾರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿತ್ತು. ವಿಚಾರ ಗೊತ್ತಿರದೇ ಟ್ರ್ಯಾಕ್ಟರ್‌ನಲ್ಲಿ ಹಳ್ಳ ದಾಟಲು ಮುಂದಾದಾಗ ನೀರಿನ ರಭಸಕ್ಕೆ ಹಳ್ಳದಲ್ಲೆ ಟ್ರ್ಯಾಕ್ಟರ್ ಮುಗುಚಿ ಬಿದ್ದಿದೆ. ಈ ವೇಳೆ ಟ್ರ್ಯಾಕ್ಟರ್‌ನಲ್ಲಿದ್ದ ಸಿದ್ದಪ್ಪ ಕೆರಮಗಿ ಮತ್ತು ಉಮೇಶ್ ಕಡತಾ ಕೂಡ ಕೊಚ್ಚಿ ಹೋಗಿದ್ದಾರೆ. ಒಂದು ದಿನದ ಬಳಿಕ ಕೊಚ್ಚಿಕೊಂಡು ಹೋದ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದ ಮುಳ್ಳಿನ ಕಂಟಿಯಲ್ಲಿ ಸಿದ್ದಪ್ಪನ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇನ್ನೂ ಮಳೆಗೆ ಬಲಿಯಾದ ಸಿದ್ದಪ್ಪ ಕಡುಬಡ ಕುಟುಂಬದವನಾಗಿದ್ದು, ಪತ್ನಿ ಮತ್ತು ಐವರು ಮಕ್ಕಳನ್ನ ಅಗಲಿದ್ದಾರೆ.. ಇನ್ನೂ ಕಲಬುರಗಿ ಜಿಲ್ಲೆಯಾದ್ಯಂತ ಹದಿನೈದು ದಿನಗಳ ಕಾಲ ಧಾರಾಕಾರ ಮಳೆ ಸುರಿದು ಕಳೆದೊಂದು ವಾರದಿಂದ ಕೊಂಚ ವಿರಾಮ ಕೊಟ್ಟಿತ್ತು. ಹೀಗಾಗಿ ಶುಕ್ರವಾರ ಕೂಡ ಬೆಳಗ್ಗೆ ಟ್ರ್ಯಾಕ್ಟರ್ ತೆಗೆದುಕೊಂಡು ಸಿದ್ದಪ್ಪ ಕೆರಮಗಿ ಹಳ್ಳ ದಾಟಿ ಊರಾಚೆ ಜಮೀನುವೊಂದಕ್ಕೆ ತೆರಳಿದ್ದರು. ಆದರೆ, ವಾಪಸ್ ಬರುವಾಗ ರಾತ್ರಿಯಾಗಿದ್ದರಿಂದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ. ಅಲ್ಲದೆ, ಮೃತ ಸಿದಪ್ಪ ಕುಟುಂಬಸ್ಥರು ಕಡುಬಡವರಾಗಿದ್ದು, ಸೂಕ್ತ ಪರಿಹಾರ ಒದಗಿಸಬೇಕೆಂದು ಮಾಜಿ MLC ಅಲ್ಲಮಪ್ರಭು ಪಾಟೀಲ್ ಒತ್ತಾಯಿಸಿದ್ದಾರೆ..
ಅದೇನೇ ಇರಲಿ ಜಿಲ್ಲೆಯಾದ್ಯಂತ ಮತ್ತೆ ಮಳೆ ಮುಂದುವರಿದಿದ್ದು, ಇದೀಗ ಕಡಣಿ ಗ್ರಾಮದಲ್ಲಿ ಮಳೆಗೆ ರೈತ ಬಲಿಯಾಗಿದ್ದರಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಒಟ್ಟಿನಲ್ಲಿ ಮೃತನ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂಬುದು ಗ್ರಾಮಸ್ಥರ ಆಗ್ರಹ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ