ಬೆಂಗಳೂರು : ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.. ಅದ್ರಲ್ಲೂ, ಬಿಬಿಎಂಪಿ ಚುನಾವಣೆಯ ಬಗ್ಗೆ ಗಂಭೀರವಾಗಿ ಚರ್ಚೆಯಾಯ್ತು.. ಪ್ರಸ್ತುತ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಭಕ್ತವತ್ಸಲ ಕಮಿಟಿ ಕೊಟ್ಟಿರುವ ವರದಿ ಹಾಗೂ ವಾರ್ಡ್ ವಿಂಗಡಣೆಯ ವರದಿಯನ್ನ ಸುಪ್ರೀಂಕೋರ್ಟ್ಗೆ ಸಲ್ಲಿಸಲಿದೆ.. ಕೋರ್ಟ್ ಮೀಸಲಾತಿ ಬಗ್ಗೆ ಯಾವ ನಿಲುವನ್ನ ಸ್ಪಷ್ಟಪಡಿಸಲಿದೆ ಅನ್ನೋ ಆಧಾರದ ಮೇಲೆ ಬಿಬಿಎಂಪಿ ಚುನಾವಣೆ ನಡೆಸೋಕೆ ತೀರ್ಮಾನಿಸಿದೆ.
ಪಶ್ಚಿಮಘಟ್ಟಗಳ ಉಳಿವಿಗೆ ಅರಣ್ಯ ವಾಸಿಗಳನ್ನ ಸ್ಥಳಾಂತರಿಸಬೇಕು. ಆ ವ್ಯಾಪ್ತಿಯಲ್ಲಿ ಯಾವುದೇ ಆಧುನಿಕ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಬಾರದೆಂದು ಕಸ್ತೂರಿರಂಗನ್ ವರದಿ ನೀಡಿದ್ದರು.. ಇದ್ರ ಬಗ್ಗೆ ರಾಜ್ಯದ ಅಭಿಪ್ರಾಯವನ್ನ ಕೇಂದ್ರ ಸರ್ಕಾರ ಕೇಳಿತ್ತು.. ಎರಡು ಬಾರಿ ವರದಿಗೆ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೂ ಸಲ್ಲಿಸಿದೆ.. ಸಂಪುಟ ಸಭೆಯಲ್ಲೂ ಮೂರನೇ ಬಾರಿಗೆ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ಸಂಪುಟದಲ್ಲಿ ತೆಗೆದುಕೊಂಡ ವಿರೋಧಿ ನಿರ್ಣಯವನ್ನೇ ಸಮಗ್ರ ವಿವರಣೆಯ ಮೂಲಕ ಕೇಂದ್ರಕ್ಕೆ ಸಲ್ಲಿಸಲು ಮುಂದಾಗಿದೆ. ಹೀಗಾಗಿ ಸದ್ಯಕ್ಕೆ ಅರಣ್ಯದಲ್ಲಿ ವಾಸ್ತವ್ಯ ಹೂಡಿರುವ ಜನರನ್ನ ಒಕ್ಕಲೆಬ್ಬಿಸುವ ಪ್ರಯತ್ನವನ್ನ ಸರ್ಕಾರ ವಿರೋಧಿಸಿದಂತಾಗಿದೆ.
ಇನ್ನು ಸಂಪುಟ ಸಭೆಯಲ್ಲಿ ಮೈಸೂರು ವಿಮಾನ ನಿಲ್ದಾಣವನ್ನ ಮೇಲ್ದರ್ಜೆಗೇರಿಸಲು ಅನುಮತಿ ನೀಡಲಾಯ್ತು.. ಅದಕ್ಕೆ ಅಗತ್ಯವಾದ 240 ಎಕರೆ ಭೂಮಿಯನ್ನ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಯ್ತು.. ಜೊತೆಗೆ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನಿಡಲು ಸಭೆ ಅನುಮೋದಿಸಿತು.
ಸಂಪುಟ ಸಭೆಯ ಪ್ರಮುಖ ನಿರ್ಧಾರಗಳೇನು..?
ಕಿತ್ತೂರು ದೇಗಾಂವ್ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು
16 ಗ್ರಾಮಗಳಿಗೆ 565 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ
ದೇವತ್ಕಲ್ ಏತ ನೀರಾವರಿಗೆ 119 ಕೋಟಿ ಅನುದಾನ
ಹುಕ್ಕೇರಿ ತಾಲೂಕಿನ 19 ಕೆರೆಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ಪೂರೈಕೆ
ಮಚಕಂಡಿ ಕೆರೆಗೆ ಘಟಪ್ರಭಾದಿಂದ 49 ಕೋಟಿ ವೆಚ್ಚದಲ್ಲಿ ನೀರು ಪೂರೈಕೆ
ಕೊಪ್ಪಳದ ಹಿರೆಹಳ್ಳ ಬ್ಯಾರೇಜ್ ನಿರ್ಮಾಣ
ಹೇರೂರಿನ 16 ಗ್ರಾಮಗಳಿಗೆ 43 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ
ಅಥಣಿಯ ಸತ್ತಿಗ್ರಾಮದ ಕುಡಿಯುವ ನೀರಿಗೆ 79 ಕೋಟಿ ಅನುದಾನ
ದೇವನಹಳ್ಳಿಯಲ್ಲಿ ಅನಂತ್ಕುಮಾರ್ ಪ್ರತಿಷ್ಠಾನಕ್ಕೆ 3.12 ಎಕರೆ ಜಮೀನು
ರಾಷ್ಟ್ರೋತ್ಥಾನ ಪರಿಷತ್ಗೆ ಶಿಕ್ಷಣ ಸಂಸ್ಥೆಗಳನ್ನ ನಡೆಸಲು ಭೂಮಿ ಮಂಜೂರು
ಬಳ್ಳಾರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 121 ಕೋಟಿಗೆ ಅನುಮತಿ
ಒಟ್ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಯನ್ನಗಮನದಲ್ಲಿಟ್ಟುಕೊಂಡೇ ಹಲವು ಮಹತ್ವದ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ.. ಕುಡಿಯುವ ನೀರು ಪೂರೈಕೆ, ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಯ್ತು.
ರಾಘವೇಂದ್ರ.ವಿ.ಎನ್, ಪೊಲಿಟಿಕಲ್ ಬ್ಯೂರೋ, ಪವರ್ ಟಿವಿ