ಶಿವಮೊಗ್ಗ : ನಾನು ಕ್ಷೇತ್ರ ಬಿಟ್ಟುಕೊಡುತ್ತಿರುವುದರಿಂದ ವಿಜಯೇಂದ್ರ ಸ್ಪರ್ಧೆಗೆ ನಿಲ್ಲುತಿದ್ದಾನೆ ಎಂದು ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದರು.
ಅಂಜನಾಪುರ ಜಲಾಶಯಕ್ಕೆ ಬಾಗಿನ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಇಲ್ಲಿ ಸ್ಥಾನ ತೆರವಾಗುವುದರಿಂದ ಅವರು ಸ್ಪರ್ಧಿಸುತ್ತಾರೆ ಎಂದು ಘೋಷಣೆ ಮಾಡುತ್ತಾ ಮಗನ ಏಳಿಗೆಗಾಗಿ ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪ ಬಿಟ್ಟುಕೊಟ್ಟಿದ್ದಾರೆ.
ಇನ್ನು ಇದೇ ವೇಳೆ ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಯಾಗುತ್ತೇವೆ ಎಂದು ಓಡಾಡುತ್ತಿದ್ದಾರೆ. ಅವರಿಗೆ ಕಿವಿಮಾತು ಹೇಳಲು ಇಚ್ಚಿಸುತ್ತೇನೆ. ನಿಮ್ಮ ಅಪ್ಪನ ಆಣೆ ನೀವು ಮುಖ್ಯಮಂತ್ರಿಯಾಗುವ ಪ್ರಶ್ನೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಅಲ್ಲದೇ ಪಕ್ಷ ಸಂಘಟನೆಗೆ ರಾಜ್ಯದಲ್ಲಿ ಓಡಾಡುತ್ತೇನೆ. ರಾಜ್ಯದಲ್ಲಿ ನೂರಕ್ಕೆ ನೂರು ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರೇ ಮುಖ್ಯಮಂತ್ರಿಯಾಗುತ್ತಾರೆ ಈ ಬಗ್ಗೆ ಅನುಮಾನ ಬೇಡ ಎಂದು ಪ್ರತಿಕ್ರಿಯಿಸಿದರು.