ತುಮಕೂರು : ಕೆಲವರಿಗೆ ಸಾಕು ಪ್ರಾಣಿ-ಪಕ್ಷಿಗಳು ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿರುತ್ತವೆ. ತಮ್ಮಿಷ್ಟದ ಜೀವಿಗಳು ನಮ್ಮ ಕಣ್ಣ ಮುಂದೆ ಒಂದು ಕ್ಷಣ ಇಲ್ಲ ಅಂದ್ರೂ ಏನೋ ಕಳೆದುಕೊಂಡ ಭಾವನೆ ಕಾಡುತ್ತಿರುತ್ತದೆ. ಅಂತಹುದರಲ್ಲಿ ಇದ್ದಕ್ಕಿದ್ದಂತೆಯೇ ಕಾಣೆಯಾದರೆ ಅದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ. ಇದೀಗ ಇಂತದ್ದೇ ನೋವಿನಲ್ಲಿ ತುಮಕೂರಿನ ಕುಟುಂಬವೊಂದು ಇದೆ. ಅದಕ್ಕೆ ಕಾರಣ ಅವರ ಪ್ರೀತಿಯ ಗಿಳಿ ನಾಪತ್ತೆಯಾಗಿರೋದು.
ತುಮಕೂರಿನ ಜಯನಗರ ಬಡಾವಣೆಯ ನಿವಾಸಿ ಅರ್ಜುನ್ ಎಂಬುವರ ಕುಟುಂಬವೇ ಸಾಕು ಗಿಳಿಯನ್ನು ಹುಡುಕಾಟ ನಡೆಸುತ್ತಿರುವ ಕುಟುಂಬ. ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಕಣ್ಮರೆಯಾದ ಗಿಳಿಯನ್ನು ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಗಿಳಿ ಹುಡುಕಿ ಕೊಡುವಂತೆ ನಗರದ 40 ಕಡೆಗಳಲ್ಲಿ ಬಹುಮಾನದ ಬ್ಯಾನರ್ ಕಟ್ಟಿ ಮನವಿ ಮಾಡಿಕೊಂಡಿದೆ. ಇನ್ನೂ ಆಫ್ರೀಕನ್ ಗ್ರೇ ಜಾತಿಗೆ ಸೇರಿದ ಬೂದು ಬಣ್ಣದ ಈ ಗಿಳಿಯು ಅರ್ಜುನ್ ಎಂಬುವವರ ಮನೆಯಿಂದ ಇದೇ 16 ರಂದು ಕಣ್ಮರೆಯಾಗಿದೆ.
ಮನೆಯಲ್ಲೇ ಮಕ್ಕಳಂತೆ ಪ್ರೀತಿಯಿಂದ ಸಾಕಿರುವ, ಈ ಗಿಳಿಗೆ ಹೊರಗೆ ತಾನೇ ಸ್ವತಂತ್ರವಾಗಿ ಆಹಾರ ಹುಡುಕಿ ತಿನ್ನುವ ಅಭ್ಯಾಸವಿಲ್ಲವಂತೆ. ನಗರದ ಸುತ್ತಮುತ್ತ ಓಡಾಟ ನಡೆಸಿ ಹುಡುಕಾಟ ನಡೆಸುತ್ತಿರುವ ಕುಟುಂಬ, ಆಟೋಗಳಲ್ಲಿ ಮೈಕ್ ಅಳವಡಿಸಿ ಗಿಳಿ ಸಿಕ್ಕರೆ ಮಾಹಿತಿ ಕೊಡುವಂತೆ ಅನೌನ್ಸ್ ಮಾಡ್ತಿದ್ದಾರೆ.
80 ವರ್ಷ ಜೀವಿತಾವಧಿ ಹೊಂದಿರುವ ಈ ಆಫ್ರೀಕನ್ ಗ್ರೇ ಗಿಳಿ ಮರಿಗೆ ಇದೀಗ 3 ವರ್ಷ ವಯಸ್ಸಾಗಿದೆ.. ಗಿಳಿಯೊಂದಿಗೆ ಕುಟುಂಬದ ಸದಸ್ಯರು ಹೃದಯಬಾಂಧವ್ಯೆ ಹೊಂದಿದ್ದು, ಅದರ ನೆಚ್ಚಿನ ತುಂಟಾಟದ ಕ್ಷಣಗಳನ್ನು ಕುಟುಂಬದ ಸದಸ್ಯರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ ನೆಚ್ಚಿನ ಗೆಳೆಯನಿಲ್ಲದೇ ಮತ್ತೊಂದು ಗಿಳಿಯೂ ಆಹಾರ ಸೇವಿಸದೇ ಮೌನವಾಗಿದೆ. ಗಿಳಿಮರಿಗಳಿಲ್ಲದೇ ಆ ಮನೆಯವರೆಲ್ಲಾ ಕಣ್ಣೀರಿಡುತ್ತಿದ್ದು, ದಯವಿಟ್ಟು ಗಿಳಿ ಸಿಕ್ಕರೆ ನಮಗೆ ಮಾಹಿತಿ ಕೊಡಿ ಅಂತ ಕೈ ಮುಗಿದು ಕೇಳಿಕೊಳ್ತಿದ್ದಾರೆ.
ಹೇಮಂತ್ ಕುಮಾರ್.ಜೆ.ಎಸ್ ಪವರ್ ಟಿವಿ ತುಮಕೂರು