ಕೋಲಾರ : ಜಿಲ್ಲೆಯಲ್ಲಿ ಅವಧಿಗೆ ಮೊದಲೇ ಮುಂಗಾರು ಹಂಗಾಮಿಗಾಗಿ ಕೃಷಿ ಕ್ಷೇತ್ರವು ಸಿದ್ಧಗೊಂಡಿದೆ. ನದಿ – ನಾಲೆಗಳು ಇಲ್ಲದ ಈ ಜಿಲ್ಲೆಯಲ್ಲಿ ಮಳೆಯಾಶ್ರಿತ ಬೆಳೆಗಳು ಪ್ರಮುಖವಾಗಿವೆ. ಇತ್ತೀಚೆಗೆ ಕೆಸಿ ವ್ಯಾಲಿ ಯೋಜನೆಗಳಿಂದ ಕೆರೆಗಳು ತುಂಬಿರುವ ಜತೆಗೆ 2 ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಜೋರಾಗಿದೆ. ಜಿಲ್ಲೆಯಲ್ಲಿನ ಒಂದು ಲಕ್ಷ ಹೆಕ್ಟೇರ್‌ನಷ್ಟು ಕೃಷಿ ಪ್ರದೇಶದಲ್ಲಿ ಈ ಸಲ ದೊಡ್ಡ ಪ್ರಮಾಣದ ಭಿತ್ತನೆಯ ಗುರಿಯನ್ನು ಹೊಂದಲಾಗಿದೆ. ಇದರಿಂದಾಗಿ ಜಿಲ್ಲೆಯ ರೈತರು ಕೂಡಾ ಮುಂಗಾರು ಹಂಗಾಮಿನ ಬೇಸಾಯದ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷವೂ 745 ಮಿಲಿ ಮೀಟರ್ ವಾಡಿಕೆ ಮಳೆಯನ್ನು ನಿರೀಕ್ಷೆ ಮಾಡಲಾಗುತ್ತದೆ. ಆದ್ರೆ, ಕಳೆದ ಎರಡು ವರ್ಷಗಳಿಂದ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮಳೆಯಾಗಿದೆ.ಜಿಲ್ಲೆಯಲ್ಲಿ ರಾಗಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ.ಜೊತೆಗೆ ತೊಗರಿ, ಅವರೆ, ಅಲಸಂದಿ ಮತ್ತು ಶೇಂಗಾ ಬೆಳೆಯನ್ನೂ ಇಲ್ಲಿ ಬೆಳೆಯುತ್ತಾರೆ. ಈಗಾಗಲೇ ರಾಗಿ, ತೊಗರಿ, ಅವರೆ, ಶೇಂಗಾ ಮತ್ತು ಅಲಸಂದಿ ಬಿತ್ತನೆ ಮಾಡಲು ಭೂಮಿಯನ್ನು ರೈತರು ಹದ ಮಾಡಿಕೊಂಡಿದ್ದು, ಭಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಕಾಯುತ್ತಿದ್ದಾರೆ.
ಜಿಲ್ಲೆಯಲ್ಲಿ ಅವಧಿಗೆ ಮುನ್ನವೇ ಮುಂಗಾರು ಆಗಮಿಸಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಅಗತ್ಯವಿರುವ ಭಿತ್ತನೆ ಬೀಜ, ವಿವಿಧ ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಕೃಷಿ ಇಲಾಖೆಯೂ ಅಭಾವವಿಲ್ಲದೆ ದಾಸ್ತಾನು ಮಾಡಿಕೊಂಡಿದೆ. ಆದ್ರೆ, ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆಸಿ ವ್ಯಾಲಿ ಯೋಜನೆ ಮೂಲಕ ನೀರು ಬಿಡುತ್ತಿರುವ ಸರ್ಕಾರ, ಅನ್ನದಾತರಿಗೆ ಬೇಕಾಗಿರೋ ಭಿತ್ತನೆ ಬೀಜ, ರಸಗೊಬ್ಬರಗಳ ಬೆಲೆ ಏರಿಸದಂತೆ ಸಬ್ಸಿಡಿ ದರದಲ್ಲಿ ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ.
ಒಟ್ನಲ್ಲಿ, ಮುಂಗಾರು ಹಂಗಾಮಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವ ರೈತರು, ಈ ಸಲ ಹೆಚ್ಚು ಇಳುವರಿಯ ನಿರೀಕ್ಷೆಯನ್ನು ಇರಿಸಿಕೊಂಡಿರುವುದು ವಿಶೇಷವಾಗಿದೆ. ಭಿತ್ತನೆ ಸಮಯ ಹಾಗೂ ತದ ನಂತರದ ಸಮಯಕ್ಕೆ ಮಳೆ ಬಂದರೆ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಲಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ