ದೇವನಹಳ್ಳಿ : 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೋಡಗುರ್ಕಿ ಗ್ರಾಮದ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ರಹಸ್ಯ ಚಿಂತನಾ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಗೆ ಕೇವಲ 60 ಬಿಜೆಪಿ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ಮಾತ್ರ ಭಾಗವಹಿಸಿದ್ದರು.
ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸಚಿವರ ಮೌಲ್ಯ ಮಾಪನ, ಕೆಲ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಲಾಗಿದೆ. ಶಾಸಕರಿಗೆ ಸ್ಪಂದನೆ ಮಾಡ್ತಿಲ್ಲ. ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಇಲ್ಲ. ಕೇವಲ ಕೆಲ ಇಲಾಖೆಗಳನ್ನು ಮಾತ್ರ ಹೈಲೈಟ್ ಮಾಡಲಾಗುತ್ತಿದೆ ಎಂಬುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ನಡೆಯುವ ಬಿಬಿಎಂಪಿ ಚುನಾವಣೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬಗ್ಗೆಯೂ ಸಹ ಚರ್ಚೆ ಆಗಿದೆ ಎನ್ನಲಾಗಿದೆ.
ಇತ್ತೀಚೆಗೆ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ, ಪಿಎಸ್‌ಐ ಹಗರಣ ಸೇರಿದಂತೆ ಅನೇಕ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸು ಕಡಿಮೆ ಆಗ್ತಾ ಇದೆ ಅನ್ನೋ ಕಾರಣಕ್ಕೆ ಸಾಲು ಸಾಲು ಸಭೆ ಮಾಡಲಾಗುತ್ತಿದೆ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ