ಬಿಹಾರ: ಪ್ರಧಾನಿ ಮೋದಿ ಇಡೀ ವಿಶ್ವದ ಕೆಲವೇ ಕೆಲವು ಅತಿ ಭದ್ರತೆಯಿರುವ ವ್ಯಕ್ತಿಗಳಲ್ಲಿ ಒಬ್ಬರು. ಆದರೆ, ಪ್ರಧಾನಿ ಮೋದಿಯನ್ನೇ ಹತ್ಯೆ ಮಾಡಲು ಸಂಚು ನಡೆದಿತ್ತಾ ಎಂಬ ಪ್ರಶ್ನೆಗೆ ಪುಷ್ಠಿ ಬಂದಿದೆ. ಬಿಹಾರದ ಪಾಟ್ನಾ ಪೊಲೀಸರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಹೀಗಾಗಿ ದೇಶದ ಸಮಸ್ತ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗುರುವಾರ ಬಿಹಾರದ ಪಾಟ್ನಾದಲ್ಲಿ ಭಾರತೀಯರೇ ಬೆಚ್ಚಿಬೀಳುವಂಥಾ ಸ್ಫೋಟಕ ಸುದ್ದಿ ಬಯಲಾಗಿದೆ. ಯಾಕೆಂದ್ರೆ ರಕ್ಷಣಾ ವ್ಯವಸ್ಥೆಗೇ ಉಗ್ರ ಪಾತಕಿಗಳು ಸವಾಲೆಸೆದ ಪ್ರಸಂಗ ನಡೆದಿದೆ. ಭಾರತವನ್ನು ಇಸ್ಲಾಂ ಇಂಡಿಯಾ ಮಾಡಲು ಉಗ್ರರು ನಡೆಸಿದ್ದ ಭಾರೀ ಸಂಚನ್ನು ಬಿಹಾರದ ಪಾಟ್ನಾ ಪೊಲೀಸರು ಬಹಿರಂಗಗೊಳಿಸಿದ್ದಾರೆ.
ಇನ್ನು ಈ ಪಾತಕಿಗಳು ಮಾಡಿದ್ದ ಸ್ಕೆಚ್ ಸಾಮಾನ್ಯವಾದದ್ದು ಅಲ್ಲವೇ ಅಲ್ಲ. ರಕ್ತಪಿಪಾಸುಗಳು ಯಾರೋ ಕಾಮನ್ ಮ್ಯಾನ್ ಹತ್ಯೆಗೆ ಸಂಚು ರೂಪಿಸಿಲ್ಲ.. ಬದಲಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹತ್ಯೆಗೈಯ್ಯಲು ಮಹಾಸ್ಕೆಚ್ ಹಾಕಿದ್ದರು ಎಂಬ ಸ್ಫೋಟಕ ಸತ್ಯ ಬೆಳಕಿಗೆ ಬಂದಿದೆ. ಪಾಟ್ನಾ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಪ್ಲ್ಯಾನ್ ಕೂದಲೆಳೆ ಅಂತರದಲ್ಲಿ ಕೈತಪ್ಪಿದೆ ಎನ್ನಲಾಗಿದೆ.
ಇನ್ನು 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ದುರುದ್ದೇಶದಿಂದ ಶಂಕಿತ ಉಗ್ರರು ಪ್ರಧಾನಿ ಮೋದಿಯನ್ನೇ ಮುಗಿಸಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಸತ್ಯ ಉಗ್ರರ ದಾಖಲೆಗಳಲ್ಲಿ ಬಯಲಾಗಿದೆ. ಒಟ್ಟು 8 ಜನರ ಉಗ್ರರ ಪಡೆಯಿಂದ ಈ ಮಹಾ ಸ್ಕೆಚ್ ನಡೆದಿತ್ತಂತೆ. ಈ ಬಗ್ಗೆ ಎಚ್ಚೆತ್ತ ಪಾಟ್ನಾ ಪೊಲೀಸರು ಅರ್ಥರ್ ಪರ್ವೇಜ್, ಎಂ.ಡಿ. ಜಲಾಲುದ್ದೀನ್ ಎಂಬ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದು, ಉಳಿದ 6 ಮಂದಿ ಉಗ್ರರಿಗಾಗಿ ತಲಾಶ್ ನಡೆಸುತ್ತಿದ್ದಾರೆ.
ಇನ್ನು ಜುಲೈ 12ರಂದು ಪಾಟ್ನಾ ಪ್ರವಾಸದ ವೇಳೆ ಪ್ರಧಾನಿ ಮೋದಿಯವರ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ.ಅಲ್ಲದೆ, ಮೋದಿ ಭೇಟಿಗೆ 15 ದಿನಗಳ ಮೊದಲು ಫುಲ್ವಾರಿ ಷರೀಫ್‌ನಲ್ಲಿ ಈ ರಕ್ತಪಿಪಾಸುಗಳು ತರಬೇತಿ ಪಡೆದಿದ್ದರು ಎಂದು ಹೇಳಲಾಗುತ್ತಿದೆ.ಮೋದಿ ಹತ್ಯೆಗೆ ಸಂಚು ರೂಪಿಸಲು ಸಭೆ ನಡೆಸಿದ್ದ ಭಯೋತ್ಪಾದಕರ ಬಗ್ಗೆ ಖಚಿತ ಮಾಹಿತಿ ಪಡೆದ ಪಾಟ್ನಾ ಪೊಲೀಸರು ಜುಲೈ 11ರಂದು ಕೇಂದ್ರ ಏಜೆನ್ಸಿಗಳ ನೆರವಿನೊಂದಿಗೆ ಶಂಕಿತ ಉಗ್ರರ ಫುಲ್ವಾರಿ ಷರೀಫ್ ಕಚೇರಿ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ 25 PFI ಕರಪತ್ರ ವಶಪಡಿಸಿಕೊಳ್ಳಲಾಗಿದೆ.
ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಸೇರಿ ಅನೇಕ ರಾಜ್ಯಗಳಿಂದ ಬರುತ್ತಿದ್ದ ಮುಸ್ಲಿಂ ಯುವಕರಿಗೆ ಈ ಉಗ್ರರು ತರಬೇತಿ ನೀಡುತ್ತಿದ್ದರು ಎನ್ನಲಾಗಿದೆೆ. ಅಲ್ಲದೆ, ದೇಶ ವಿರೋಧಿ ಅಭಿಯಾನಕ್ಕೆ ಮುಸ್ಲಿಂ ರಾಷ್ಟ್ರಗಳಿಂದ ಹಣ ಪಡೆಯುತ್ತಿದ್ದ ಈ ಉಗ್ರರು, ಯುವಕರಿಗೆ ಕೋಮುಗಲಭೆ ಬಗ್ಗೆ ತರಬೇತಿ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಬಿಹಾರ ಪೊಲೀಸರು ಹಾಗೂ ಕೇಂದ್ರದ ಏಜೆನ್ಸಿಗಳು ಉಗ್ರರ ಆ ಪ್ಲ್ಯಾನ್ಗಳನ್ನೆಲ್ಲಾ ಉಲ್ಟಾ ಮಾಡಿದ್ದು ದೇಶದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಒಟ್ಟಾರೆ ನೊಣ ಕೂಡ ಸೇರದಷ್ಟು ಅತಿಭದ್ರತೆ ಹೊಂದಿರುವ ವಿಶ್ವದ ಕೆಲವೇ ಕೆಲ ಪ್ರಮುಖರಲ್ಲಿ ಒಬ್ಬರಾದ ಪ್ರಧಾನಿ ಮೋದಿ ಹತ್ಯೆಗೇ ಸಂಚು ರೂಪಿಸಿದ್ದ ಉಗ್ರರನ್ನು ಸರ್ಕಾರ ಸುಮ್ಮನೆ ಬಿಡಬಾರದು. ಜತೆಗೆ ಬಿಹಾರ ಪೊಲೀಸರ ಸಮಯಪ್ರಜ್ಞೆಗೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಜನತೆ ಒಮ್ಮೆ ಹ್ಯಾಟ್ಸಾಪ್ ಹೇಳಲೇಬೇಕು.
ಬ್ಯೂರೋ ರಿಪೋರ್ಟ್ ಪವರ್ ಟಿವಿ