ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಕರಣದ ಅಕ್ರಮ ಬಗೆದಷ್ಟು ಬಯಲಾಗ್ತಿದೆ. ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಅಮೃತ್ ಪೌಲ್ ಅವರನ್ನ ಮತ್ತೆ 3 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಕೋರ್ಟ್ ನೀಡಿದೆ.
ಜುಲೈ 4ರಂದು ಅಮೃತ್ ಪೌಲ್ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಪಡೆದಿದ್ದರು. ಇಂದಿಗೆ ಅವಧಿಗೆ ಮುಗಿದ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅಮೃತ್ಪೌಲ್ ಜೊತೆ ಇನ್ನುಳಿದ ನಾಲ್ವರು ಆರೋಪಿಗಳಾದ ಡಿವೈಎಸ್ಪಿ ಶಾಂಕಕುಮಾರ್, ಎಫ್ಡಿಎ ಹರ್ಷ, ಆರ್ಎಸ್ಐ ಶ್ರೀಧರ್ ಹಾಗೂ ಶ್ರೀನಿವಾಸ್ ಎಂಬುವರನ್ನ ಹಾಜರುಪಡಿಸಿದ್ದರು. ಅಮೃತ್ ಪೌಲ್ ಅವರು ಇಂದು ತಮ್ಮ ಐಫೋನ್ನ ಪಾಸ್ವರ್ಡ್ ನೀಡಿದ್ದಾರೆ.
ಇನ್ನು ಇದನ್ನ ಈಗಾಗಲೇ ಫಾರ್ಮ್ಯಾಟ್ ಮಾಡಲಾಗಿದೆ. ಹೀಗಾಗಿ ಕ್ಲೌಡ್ಗೆ ಹಾಕಿ ಡಾಟಾ ರಿಕವರಿ ಮಾಡಬೇಕು. ಅಲ್ಲದೆ ಅಮೃತ್ ಪಾಲ್ಗೆ 1.36 ಕೋಟಿ ರೂಪಾಯಿ ನೀಡಿರುವುದಾಗಿ ಶಾಂತಕುಮಾರ್ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ವಿಚಾರಣೆ ನಡೆಸಬೇಕು. 6 ದಿನಗಳ ಕಾಲ ಅಮೃತ್ ಪೌಲ್ ಅವರನ್ನ ನಮ್ಮ ಕಷ್ಟಡಿಗೆ ನೀಡಬೇಕು ಎಂದು ಕೋರ್ಟ್ಗೆ ಸಿಐಡಿ ಅಧಿಕಾರಿಗಳು ಮನವಿ ಸಲ್ಲಿಸಿದರು. ಹೀಗಾಗಿ ಮತ್ತಷ್ಟು ವಿಚಾರಣೆಗಾಗಿ ಮೂರು ದಿನ ಸಿಐಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.