ಬೆಂಗಳೂರು : 75 ವರ್ಷ ಅನ್ನೋದು ಒಬ್ಬ ರಾಜಕಾರಣಿಗೆ ಸಾರ್ಥಕತೆ ತರುವ ವಯಸ್ಸು ಎಂದು ಕಾಂಗ್ರೇಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ಸಮಾಜದ ಹಿರಿಯರು. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಸಮಾಜದ ಬಗ್ಗೆಯೂ ಅವರ ಜತೆ ಚರ್ಚೆ ಮಾಡಿದ್ದೇನೆ. ಇದು ಒಂದು ಸೌಹಾರ್ದಯುತ ಭೇಟಿ. ಈ ಭೇಟಿಯಲ್ಲಿ ರಾಜಕೀಯದ ವಿಚಾರ ಇರಲಿಲ್ಲ. ರಾಜಕಾರಣಕ್ಕೂ ಈ ಭೇಟಿಗೂ ಸಂಬಂಧ ಇಲ್ಲ ಎಂದು ಹೇಳಿದರು.
ಇನ್ನು, ಸಿದ್ದರಾಮೋತ್ಸವವನ್ನು ನಾವೆಲ್ರೂ ಸೇರಿ ಮಾಡ್ತಿದೀವಿ. ಸಿದ್ದರಾಮೋತ್ಸವ ಕಮಿಟಿಯಲ್ಲಿ ನಾನೂ ಇದೀನಿ 75 ವರ್ಷ ಅನ್ನೋದು ಒಬ್ಬ ರಾಜಕಾರಣಿಗೆ ಸಾರ್ಥಕತೆ ತರುವ ವಯಸ್ಸು. ಶಿವಕುಮಾರೋತ್ಸವ ಮಾಡಿ ಅಂತ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ. ಎಂದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ವಿಚಾರದ ಬಗ್ಗೆಯೂ ಯಡಿಯೂರಪ್ಪ ಬಳಿ ಚರ್ಚೆ ಮಾಡಿದ್ದೇನೆ. ತಾಂತ್ರಿಕ ಕಾರಣಕ್ಕೆ ಮೀಸಲಾತಿ ವಿಳಂಬ ಆಗಿದೆ. ಬೊಮ್ಮಾಯಿ ಅವರು ಬೇರೆ ಸಮುದಾಯಗಳಿಗೆ ತೊಂದರೆ ಆಗದಂತೆ ಮೀಸಲಾತಿ ಕೊಡುವ ಭರವಸೆ ನೀಡಿದ್ದಾರೆ. ಈ ಅವಧಿಯಲ್ಲೇ ಮೀಸಲಾತಿ ಸಿಗುವ ಭರವಸೆ ಇದೆ ಎಂದು ಹೇಳಿದರು.