ಮಂಗಳೂರು : ರಸ್ತೆ ಸಂಪರ್ಕ ಕಡಿತ ಆದಲ್ಲಿ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ರಾತ್ರಿ ವೇಳೆ ಕಡಲ್ಕೊರೆತ ಪ್ರದೇಶಗಳ ವೀಕ್ಷಣೆ ಮಾಡಿದ ಸಿಎಂ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿರುವ ಹಾನಿ ನೋಡಿದ್ದೇನೆ. ಸುಳ್ಯದಲ್ಲಿ ಭೂಕಂಪನದಿಂದ ಹಾನಿಯಾದ ಮನೆಗೆ ಹೋಗಿದ್ದೇವೆ. ಉಳ್ಳಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಲ್ಕೊರೆತ ಉಂಟಾಗಿದೆ. ಕಡಲ್ಕೊರೆತ ತಡೆಗೆ ಎಡಿಬಿ ಕೆಲಸ ಸರಿಯಾಗಿಲ್ಲ ಎಂಬ ಆರೋಪವಿದೆ. ಹೊಸ ತಂತ್ರಜ್ಞಾನವನ್ನು ಈ ಪ್ರದೇಶದಲ್ಲೇ ಅಳವಡಿಸಲು ಅನುಮತಿ ನೀಡಲಾಗಿದೆ ಎಂದರು.
ಇನ್ನು, ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನ ಬಟ್ಟಂಪಾಡಿಯಲ್ಲೇ ಜಾರಿ ಮಾಡುತ್ತೇವೆ. ರಸ್ತೆ ಸಂಪರ್ಕ ಕಡಿತ ಆದಲ್ಲಿ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಶಾಶ್ವತ ಯೋಜನೆ ಜಾರಿ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತಿದ್ದು, ಭೂಕಂಪದ ಬಗ್ಗೆ ಅಧ್ಯಯನಕ್ಕೆ ಮೂರು, ನಾಲ್ಕು ಸಂಸ್ಥೆಗೆ ಹೇಳಿದ್ದೇವೆ. ಅಧ್ಯಯನ ಮಾಡಿ ಸಲಹೆ ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ. ಕಡಲ ತೀರದಲ್ಲಿ ಅಪಾಯದಲ್ಲಿರುವ ಮನೆಯವರನ್ನು ಶಿಫ್ಟ್ ಮಾಡಬೇಕು. ಮುಂದಿನ ತಿಂಗಳು ಭಾರಿ ಮಳೆಯಾದ್ರೆ ಇನ್ನಷ್ಟು ಹಾನಿಯಾಗಬಹುದು ಎಂದು ಉಳ್ಳಾಲದ ಬಟ್ಟಂಪಾಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.