ಶ್ರೀಲಂಕಾ : ಆರ್ಥಿಕ ಪರಿಸ್ಥಿತಿ ಹದಗೆಟ್ಟು ಲಂಕಾ ಬಹುತೇಕ ಕುಸಿದುಹೋಗಿದೆ. ಕಳೆದ ನಾಲ್ಕೈದು ತಿಂಗಳಿಂದ ಸಿಂಹಳೀಯರ ನಾಡಿನಲ್ಲಿ ಜನರು ಪ್ರತಿಭಟನೆ, ದಂಗೆ, ಹಿಂಸಾಚಾರ ನಡೆಸುತ್ತಿದ್ದಾರೆ. ಒಂದೆಡೆ ಆರ್ಥಿಕ ಬಿಕ್ಕಟ್ಟು, ಅಗತ್ಯ ವಸ್ತುಗಳ ಅಭಾವ, ಇನ್ನೊಂದೆಡೆ ರಾಜಕೀಯ ಬಿಕ್ಕಟ್ಟು, ಜನರು ದಂಗೆ ಏಳುತ್ತಿರುವುದು, ಇವೆಲ್ಲವೂ ದ್ವೀಪ ರಾಷ್ಟ್ರವನ್ನು ಹೈರಾಣಾಗಿಸಿದೆ.
ಭಾರತ, ರಷ್ಯಾ ಹಾಗೂ ಕೆಲ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ನೀಡಿದ ಅಲ್ಪಸ್ವಲ್ಪ ಸಹಾಯದಿಂದ ಶ್ರೀಲಂಕಾ ಹೇಗೋ ಹಾಗೋ ಕುಂಟುತ್ತಾ ಸಾಗುತ್ತಿದೆ.
ಪರಿಸ್ಥಿತಿ ಹೀಗೇ ಮುಂದುವರಿದರೆ ಲಂಕಾಗೆ ಆ ರಾವಣೇಶ್ವರ ಬಂದರೂ ಕಾಪಾಡಲು ಸಾಧ್ಯ ಇಲ್ಲ ಎನ್ನಬಹುದು. ಮೇ ತಿಂಗಳಲ್ಲಿ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ರಾನಿಲ್ ವಿಕ್ರಮಸಿಂಘೆ ಕೂಡ ಪ್ರಧಾನಿ ಪಟ್ಟದಿಂದ ಇಳಿಯುತ್ತಿದ್ದಾರೆ. ಗೊಟಬಯ ರಾಜಪಕ್ಸೆ ಕೂಡ ಜುಲೈ 13ರಂದು ರಾಜೀನಾಮೆ ನೀಡುತ್ತಿದ್ದಾರೆ. ಇಡೀ ಸಂಪುಟವೇ ವಿಸರ್ಜನೆಯಾಗಲಿದೆ. ಗೊಟಬಯ ರಾಜೀನಾಮೆ ನೀಡುತ್ತಾರೆಂದ ಬಳಿಕ ಪ್ರತಿಭಟನಾಕಾರರ ಆಕ್ರೋಶ ತುಸು ತಗ್ಗಿದೆ.
2020ರಲ್ಲಿ ಗೊಟಬಯ ರಾಜಪಕ್ಸೆ ಅವರು ಶ್ರೀಲಂಕಾ ಅಧ್ಯಕ್ಷರಾಗಿ ನೇಮಕವಾಗಿದ್ದರು. ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ ಕೂಡ ರಾಜೀನಾಮೆ ನೀಡಿದ್ದಾರೆ. ಆದರೂ, ಸುಮ್ಮನಾಗದ ಉದ್ರಿಕ್ತಗೊಂಡ ಪ್ರತಿಭಟನಾಕಾರರ ಗುಂಪು ಪ್ರಧಾನಿ ನಿವಾಸಕ್ಕೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸರ್ವಪಕ್ಷ ಸರ್ಕಾರ ರಚನೆಗೆ ಸಿದ್ಧತೆ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಅತಿದೊಡ್ಡ ಪ್ರತಿಭಟನೆಗಳು ನಡೆದ ನಂತರ, ಸರ್ವಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡಲು ಅಧ್ಯಕ್ಷ ರಾಜಪಕ್ಸೆ ಮತ್ತು ಪ್ರಧಾನ ಮಂತ್ರಿ ವಿಕ್ರಮಸಿಂಘೆ ರಾಜೀನಾಮೆ ಕೊಡಬೇಕು ಎಂದು ಸ್ಪೀಕರ್ ಅಬೇವರ್ಧನ ಕೇಳಿದ್ದರು. ಸ್ಪೀಕರ್ ಅಬೇವರ್ಧನ ಅಧ್ಯಕ್ಷ ರಾಜಪಕ್ಸೆಗೆ ಬರೆದ ಪತ್ರದಲ್ಲಿ, ಪಕ್ಷದ ನಾಯಕರ ಸಭೆಯ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪ್ರಧಾನಿ ವಿಕ್ರಮಸಿಂಘೆ ಕೂಡ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದು, ಸರ್ವಪಕ್ಷಗಳನ್ನು ಒಳಗೊಂಡ ಸರ್ಕಾರ ರಚನೆಗೆ ಮುಂದಾಗಿದ್ದಾರೆ.