ತುಮಕೂರು: ಅದು ಶಿಕ್ಷಣ ಸಚಿವರ ತವರು ಜಿಲ್ಲೆ. ಆದರೆ ಜಿಲ್ಲೆಯ ಶಾಲೆಯೊಂದರ ಮಕ್ಕಳ ಗೋಳನ್ನು ಕೇಳೋರಿಲ್ಲದಂತಾಗಿದೆ. ಅಷ್ಟೇ ಅಲ್ಲದೇ ಮರವೇ ಮಂತ್ರಾಲಯ ಎಂಬಂತಾಗಿದೆ ಇಲ್ಲಿನ ಮಕ್ಕಳ ಪರಿಸ್ಥಿತಿ. ಏನಪ್ಪಾ ಹೀಗ್ ಹೇಳ್ತಾ ಇದ್ದಾರೆ ಅಂತೀರಾ..?
ಮುರಿದು ಹೋಗಿರೋ ತೀರುಗಳು, ಒಡೆದು ಹೋಗಿರೋ ಹೆಂಚು, ಮರದಡಿಯಲ್ಲಿ ಕುಳಿತು ಪಾಠ ಕೇಳುತ್ತಿರೋ ಮಕ್ಕಳು, ಶಾಲೆ ಕಟ್ಟಡ ಬೇಕು ಎನ್ನುತ್ತಿರೋ ಸಾರ್ವಜನಿಕರು. ಇಂತಹದೊಂದು ದೃಶ್ಯ ಕಂಡು ಬಂದಿದ್ದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತವರು ಜಿಲ್ಲೆಯಾಗಿರೋ ತುಮಕೂರಿನ ತೊರೆಮಾವಿನಹಳ್ಳಿ ಸರ್ಕಾರಿ ಶಾಲೆಯಲ್ಲಿ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿ ಸರ್ಕಾರಿ ಶಾಲೆ ನೋಡಿದ್ರೆ ನಿಜಕ್ಕೂ ನಮ್ಮ ಮಕ್ಕಳನ್ನು ಈ ಶಾಲೆಗೆ ಕಳಿಸಬೇಕಾ ಅನ್ನೋ ಭಾವನೇ ಮೂಡೋದಂತೂ ಸತ್ಯ, ಅಷ್ಟೇ ಅಲ್ಲದೇ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಈ ಕಾಲದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸೋ ಪೋಷಕರಿಗೆ ಈ ರೀತಿಯ ನೀರ್ಲಕ್ಷ್ಯ ನಿಜಕ್ಕೂ ಅಸತ್ಯ ಹುಟ್ಟಿಸದೇ ಇರಲಾರದು. ಯಾಕೆಂದ್ರೆ, ತೊರೆಮಾವಿನಹಳ್ಳಿ ಸರ್ಕಾರಿ ಶಾಲಾ ಕಟ್ಟಡ ಈಗಾಗಲೇ ಹಳೆಯ ಕಟ್ಟಡವಾಗಿದ್ದು ಛಾವಣಿ ಕುಸಿಯುವ ಹಂತ ತಲುಪಿದೆ. ಅಷ್ಟೇ ಅಲ್ಲದೇ, ಛಾವಣಿಗೆ ಹಾಕಿರೋ ತೀರುಗಳು ಗೆದ್ದಲು ಹಿಡಿಯುತ್ತಿದ್ರೆ, ಹೆಂಚುಗಳು ಹೊಡೆದು ಕೆಳಗೆ ಬೀಳುತ್ತಿವೆ. ಮಕ್ಕಳು ಜೀವಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.
ಅಷ್ಟೇ ಅಲ್ಲದೇ, ಈಗಾಗಲೇ ಶಾಲಾ ಕಟ್ಟಡ ಮಳೆಯಿಂದಾಗಿ ಕುಸಿಯುವ ಹಂತ ತಲುಪಿರೋದರಿಂದ ಎಚ್ಚೆತ್ತ ಶಿಕ್ಷಕರು ಮರದಡಿಯಲ್ಲಿ ಮಕ್ಕಳಿಗೆ ಪಾಠ ಪ್ರವಚನವನ್ನು ನಡೆಸುತ್ತಿದ್ದಾರೆ, ಅಲ್ಲದೇ ಸ್ಥಳೀಯ ಮುಖಂಡರು ಈಗಾಗಲೇ ಶಿಕ್ಷಣ ಇಲಾಖೆಗೆ ತಿಳಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಮಾತುಗಳು ಮುಖಂಡರಿಂದ ಕೇಳಿ ಬರುತ್ತಿದ್ದು, ಮಕ್ಕಳ ವಿಚಾರದಲ್ಲಿ ಅಧಿಕಾರಿಗಳು ಈ ಮಟ್ಟಿಗೆ ನಿರ್ಲಕ್ಷ್ಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಟ್ಟಾರೆ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಕಡಿಮೆಯಾದ್ರೆ ಏನು ಗತಿ..? ಹಾಗಾಗಿ ಇನ್ನಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆಯಲ್ಲದೇ, ಶಿಕ್ಷಣ ಸಚಿವರ ಸ್ವಜಿಲ್ಲೆಯಲ್ಲೇ ಸರ್ಕಾರಿ ಶಾಲೆಗಳ ಸ್ಥಿತಿ ಹೀಗಾದ್ರೆ ಬೇರೆ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ದೇವರೇ ಬಲ್ಲ.
ಹೇಮಂತ ಕುಮಾರ್.ಜೆ.ಎಸ್ ಪವರ್ ಟಿವಿ ತುಮಕೂರು.