ಶಿವಮೊಗ್ಗ : ಅಲ್ಲಲ್ಲಿ ನೆಲದ ಮೇಲಿಟ್ಟಿರುವ ಡಬ್ಬಿಗಳು, ಬಕೆಟ್ಗಳು.. ಕಂಪ್ಯೂಟರ್ಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸುತ್ತಿರುವ ಸಿಬ್ಬಂದಿ.. ಆಗ್ಲೋ ಈಗ್ಲೋ ಬೀಳುವ ಭಯದಲ್ಲಿರುವ ಕಚೇರಿಯ ಮೇಲ್ಛಾವಣಿ.. ಹೌದು, ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ನೀರಾವರಿ ತನಿಖಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿ, ಸರ್ಕಾರಿ ಅಧಿಕಾರಿಗಳ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಸುಮಾರು 150 ವರ್ಷಗಳ ಹಿಂದಿನ ಈ ಕಟ್ಟಡಕ್ಕೆ ಕಾಯಕಲ್ಪವಾಗಬೇಕೆಂದು ಇಲ್ಲಿನ ಸಿಬ್ಬಂದಿ ಮನವಿ ಮಾಡಿಕೊಂಡಿದ್ದರೂ ಕೂಡ ಯಾರೂ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಮಳೆ ಬಂತು ಅಂದ್ರೆ ಈ ಕಟ್ಟಡದಲ್ಲಿ ಎಲ್ಲಿ ಸೋರುವುದಿಲ್ಲ ಎಂಬುವುದನ್ನ ನೋಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೋರುವ ಜಾಗದಲ್ಲಿ ಬಕೆಟ್, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳನ್ನು ಇಟ್ಟಿರುವ ಇಲ್ಲಿನ ಸಿಬ್ಬಂದಿವರ್ಗ ದಾಖಲೆಗಳ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಕಚೇರಿಯಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಜೆರಾಕ್ಸ್ ಮೆಷಿನ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೇಗೆ ಕಾಪಾಡಿಕೊಳ್ಳುವುದು ಭಯ ಇಲ್ಲಿನ ಸಿಬ್ಬಂದಿಗೆ ಕಾಡುತ್ತಿದೆ. ಶಿಥಿಲಗೊಂಡಿರುವ ಮೇಲ್ಛಾವಣಿ ದುರಸ್ಥಿಗೆ ಹಲವು ಬಾರಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
ಒಟ್ಟಾರೆ, ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕರೆಯುವ ಅಧಿಕಾರಿಗಳು, ಈ ದೇವಸ್ಥಾನವನ್ನು ಕೂಡಲೇ ಸರಿಪಡಿಸಬೇಕಾಗಿದೆ. ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುವ ಸರ್ಕಾರ ಅಧಿಕಾರಿಗಳು ಕೇಳಿದರೆ, ಹಣ ಬಿಡುಗಡೆ ಮಾಡಲ್ವಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಕೂಡಲೇ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಎಚ್ಚೆತ್ತು ಕಚೇರಿ ದುರಸ್ಥಿಪಡಿಸಬೇಕಿದೆ.