Tuesday, November 26, 2024

IPS ಅಧಿಕಾರಿ ಅಮೃತ್ ಪೌಲ್ ಅರೆಸ್ಟ್‌

ಬೆಂಗಳೂರು : ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಬಂಧನಕ್ಕೆ ಒಳಗಾಗಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ, ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು. ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಏಪ್ರಿಲ್ 27, 2022 ರಂದು ವರ್ಗಾವಣೆ ಮಾಡಲಾಗಿತ್ತು.

1995ನೇ ಇಸ್ವಿ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರು ಮೂಲತಃ ಪಂಜಾಬ್‌ನವರು. ಕರ್ನಾಟಕ ಕೇಡರ್‌ನಲ್ಲಿ ಆಯ್ಕೆ ಆಗಿದ್ದ ಅವರ ವಿರುದ್ಧ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ವೇಳೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಿ ವಿಚಾರಣೆ ಕೂಡಾ ನಡೆಸಲಾಗಿತ್ತು. ಇದೀಗ ಅವರ ಬಂಧನವಾಗಿದೆ.

ಬಂಧನದ ಬಳಿಕ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು.. ಈ ವೇಳೆ, 14 ದಿನಗಳ ಕಾಲ ಕಸ್ಟಡಿಗೆ ಕೊಡಿ ಎಂದು ಸಿಐಡಿ ಕೋರ್ಟ್‌ಗೆ ಮನವಿ ಮಾಡಿತ್ತು.. ಆದ್ರೆ, 10 ದಿನಗಳ ಕಾಲ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತು. 25 ಜನರಿಂದ ಒಟ್ಟು 5 ಕೋಟಿ ಡೀಲ್ ಆರೋಪ ಇದ್ದು, ತಲಾ 30 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ , OMR ಶೀಟ್ ಕೊಠಡಿ ಕೀ ಇವರ ಉಸ್ತುವಾರಿಯಲ್ಲೇ ಇತ್ತು. ಹೀಗಾಗಿ, ಓಂಎಂಆರ್ ತಿದ್ದುಪಡಿ ಬಗ್ಗೆ ಸಿಐಡಿಯಿಂದ ನ್ಯಾಯಾಧೀಶರ ಎದುರು ಉಲ್ಲೇಖಿಸಲಾಯ್ತು.

ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಯಾವೊಬ್ಬ ಅಧಿಕಾರಿಯನ್ನೂ ಬಿಡಲ್ಲ ಎಂದು ಎಚ್ಚರಿಸಿದೆ ಸರ್ಕಾರ. ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಬಂಧನದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಪಿಎಸ್‌ಐ ಅಕ್ರಮದಲ್ಲಿ ಎಡಿಜಿಪಿ ಅಮ್ರತ್‌ ಪೌಲ್ ಅರೆಸ್ಟ್ ಮಾಡಿರುವ ಸಿಐಡಿ ಕಾರ್ಯಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ಶ್ಲಾಘಿಸಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿಯದೆ ತನಿಖೆ ಮಾಡಿದ್ದಾರೆ.. ಈ ತನಿಖೆ ಇನ್ನು ಬಹಳಷ್ಟು ದೂರ ಸಾಗಬೇಕಿದೆ.. ಪ್ರಭಾವಿ ಕಿಂಗ್‌ ಪಿನ್‌ಗಳನ್ನು ಸಿಐಡಿ ಹಿಡಿಯಬೇಕು. ಪ್ರಭಾವಿಗಳು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು.. ಮಹಾ ಕಿಂಗ್‌ ಪಿನ್‌ ಇದ್ದಾರೆ ಅಂತ ಮೊದಲೇ ಹೇಳಿದ್ದೆ. ಅವರ ಹೆಸರು ಹೇಳಿದರ ಸರ್ಕಾರವೇ ಬಿದ್ದು ಹೋಗುತ್ತೆ ಎಂದು ಹೆಚ್‌.ಡಿ.ಕೆ ಬಾಂಬ್‌ ಸಿಡಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಇಡಿ ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಪ್ರಕರಣ.. 545 ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದ ಈ ಪ್ರಕರಣದಲ್ಲಿ ಬರೋಬ್ಬರಿ 40 ಕ್ಕೂ ಹೆಚ್ಚು ಜನ ಅಂದರ್ ಆಗಿದ್ದಾರೆ.. ಸಿಐಡಿ ಅಧಿಕಾರಿಗಳು ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ರು.. ದಿವ್ಯಾ ಹಾಗರಗಿ, ಡಿವೈಎಸ್ ಪಿ ಶಾಂತಕುಮಾರ್ ಸೇರಿದಂತೆ ಹಲವರನ್ನು ಈ ಪ್ರಕರಣದಲ್ಲಿ ಬಂಧನ ಮಾಡಿದ್ರು.. ಡಿವೈಎಸ್ ಪಿ ಶಾಂತಕುಮಾರ್ ಅರೆಸ್ಟ್ ಆದ ನಂತರ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆಗೇ ಆಗ್ತಾರೆ ಅಂತ ಪೊಲೀಸ್ ಇಲಾಖೆಯಲ್ಲೆ ಮಾತಾನಾಡಿಕೊಂಡಿದ್ರು. ಆ ದಿನ ಇವತ್ತು ಬಂದಿದೆ.. ಎಡಿಜಿಪಿ ಅಮೃತ್ ಪೌಲ್ ರನ್ನ ಸಿಐಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಅಶ್ವಥ್ ಎಸ್‌. ಎನ್.ಕ್ರೈಂ ಬ್ಯೂರೋ ಪವರ್ ಟಿವಿ..‌

RELATED ARTICLES

Related Articles

TRENDING ARTICLES