ಚಿಕ್ಕಮಗಳೂರು : ಸೀಳು ನಾಯಿ ಹಾಗೂ ಬೀದಿನಾಯಿಗಳ ಹಾವಳಿಗೆ ಬೆದರಿದ ಜಿಂಕೆಯೊಂದು ಮನೆಯೊಳಗೆ ಬಂದು ಅವಿತು ಕುಳಿತಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿ ನಡೆದಿದೆ.
ಕಣಿವೆ ಗ್ರಾಮ ಕಾಡಂಚಿನ ಗ್ರಾಮ. ಮೇವು ತಿನ್ನುತ್ತಾ ಕಾಡಂಚಿಗೆ ಬಂದ ಜಿಂಕಿ ನಾಡಿಗೂ ಕಾಲಿಟ್ಟಿತ್ತು. ಜಿಂಕಿಯನ್ನ ಕಂಡ ಬೀದಿ ನಾಯಿಗಳು ಹಾಗೂ ಸೀಳು ನಾಯಿಗಳು ಜಿಂಕೆಯನ್ನ ಬೇಟೆಯಾಡಲು ಮುಂದಾದವು. ಆಗ ಅವುಗಳಿಂದ ತಪ್ಪಿಸಿಕೊಂಡ ಜಿಂಕೆ ಕಣಿವೆ ಗ್ರಾಮದ ಪದ್ಮನಾಭ ಎಂಬುವರ ಮನೆಯೊಳಗೆ ಓಡಿ ಬಂದು ಅವಿತು ಕೂತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮನೆಯವರಂತೆ ನಡುಮನೆಯಲ್ಲಿ ರಾಜಾರೋಷವಾಗಿ ನನ್ನದೇ ಮನೆ ಎಂಬಂತೆ ಆರಾಮಾಗಿ ಕೂತಿದೆ. ಜಿಂಕೆಯನ್ನ ಕಂಡ ಮನೆಯವರು ಕೂಡ ಅದನ್ನ ಓಡಿಸದೆ ಸುಸ್ತಾಗಿದ್ದ ಜಿಂಕಿಗೆ ನೀರು ಕುಡಿಸಿ ಸಂತೈಸಿದ್ದಾರೆ. ಬಳಿಕ ಮನೆಯವರು ಹಾಗೂ ಮಕ್ಕಳು ಜಿಂಕೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಮನೆಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದಾಗ ಜಿಂಕೆಯ ಕಾಲಿಗೆ ಗಾಯವಾಗಿದ್ದು ಕಂಡು ಬಂದಿದ್ದು, ಜಿಂಕೆ ನಡೆಯಲಾರದ ಸ್ಥಿತಿಯಲ್ಲಿತ್ತು. ಬಳಿಕ ಅಧಿಕಾರಿಗಳು ಜಿಂಕೆಯನ್ನ ಜೀಪಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮನೆಯೊಳಗೆ ಬಂದು ನೆಂಟರಂತೆ ಕೂತ ಜಿಂಕೆಯನ್ನ ಅಕ್ಕಪಕ್ಕದವರು ಬಂದು ನೋಡಿಕೊಂಡು ಹೋದರು.