ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಸಿಗಲಾರದ ಪರಿಸ್ಥಿತಿ ಯಾವ ನಾಯಕರಿಗೂ ಬರಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯವರು, ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು, ನಿಮ್ಮ ಉತ್ಸವ ನಾಲ್ಕು ಕುರ್ಚಿಗಳನ್ನು ತುಂಬಬಹುದೇ ಹೊರತು, ನಾಲ್ಕು ಸೀಟುಗಳನ್ನು ಗಳಿಸಿ ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಅಷ್ಟೇಅಲ್ಲದೇ ಚಾಮುಂಡೇಶ್ವರಿಯಲ್ಲಿ ದೇವಿ ಕೈಹಿಡಿಯಲಿಲ್ಲ, ಬದಾಮಿಯಲ್ಲೂ ಬನಶಂಕರಿಯ ಶಾಪ, ಸವದತ್ತಿ ಎಲ್ಲಮ್ಮನೂ ನಿಮ್ಮನ್ನು ಕಾಪಾಡಲಾರಳು. ಸಿದ್ದರಾಮಯ್ಯರ ಪಾಪದ ಕೊಡ ತುಂಬಿದೆ! ಸಿದ್ದರಾಮಯ್ಯನವರೇ, ಮೂಲ ಕಾಂಗ್ರೆಸ್ಸಿಗರು ನಿಮ್ಮಿಂದಾಗಿಯೇ ಪಕ್ಷ ತೊರೆಯುತ್ತಿರುವುದು ನಿಜವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಮತ್ತಷ್ಟು ಖಾಲಿಯಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ನಾಂದಿ ಹಾಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೆಸರು ಘೋಷಿಸದೇ ಇದ್ದಲ್ಲಿ, ಆರು ಪಕ್ಷ ಬಿಟ್ಟು ಬಂದಿರುವ ಸಿದ್ದರಾಮಯ್ಯ ಅವರಿಗೆ ಏಳನೇ ಬಾರಿ ಪಕ್ಷಾಂತರ ಮಾಡುವುದು ಕಷ್ಟವೇ? ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.
ಸಿದ್ದು ಆ ಭಾಗ್ಯ, ಈ ಭಾಗ್ಯ ಎಂದು ಘೋಷಣೆ ಮಾಡಿದ್ದೇ ಬಂತು. ಜನಪ್ರಿಯತೆ ಮತ್ತು ಪ್ರಚಾರಕ್ಕಾಗಿ ಮಾಡಿದ ಯಾವ ಕಾರ್ಯವೂ ಈಗ ಸಿದ್ದರಾಮಯ್ಯ ಸಹಾಯಕ್ಕೆ ಬರುತ್ತಿಲ್ಲ. ಹಲವು ಬಿಟ್ಟಿ ಭಾಗ್ಯ ನೀಡಿದ ಸಿದ್ದರಾಮಯ್ಯಗೆ ಈಗ ಕ್ಷೇತ್ರ ಭಾಗ್ಯದ ಫಲಾನುಭವಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿ ಕಾಲೆಳೆದಿದೆ.
ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು @siddaramaiah?
ನಿಮ್ಮ ಉತ್ಸವ ನಾಲ್ಕು ಕುರ್ಚಿಗಳನ್ನು ತುಂಬಬಹುದೇ ಹೊರತು, ನಾಲ್ಕು ಸೀಟುಗಳನ್ನು ಗಳಿಸಿ ಕೊಡದು.
ಸಿದ್ದರಾಮಯ್ಯನವರೇ, ಮೂಲ ಕಾಂಗ್ರೆಸ್ಸಿಗರು ನಿಮ್ಮಿಂದಾಗಿಯೇ ಪಕ್ಷ ತೊರೆಯುತ್ತಿರುವುದು ನಿಜವಲ್ಲವೇ?#ಸಿದ್ದುಹಾಸ್ಯೋತ್ಸವ
— BJP Karnataka (@BJP4Karnataka) July 2, 2022