ಮೈಸೂರು : ಇಂದು ಆಷಾಢ ಮಾಸದ ಮೊದಲ ಶುಕ್ರವಾರ. ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲೂ ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತೆ ಎಂಬ ಭಾವನೆ. ಹೀಗಾಗಿ ಆಷಾಢದ ಎಲ್ಲಾ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರ್ತಾರೆ. ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಸಕಲ ವ್ಯವಸ್ಥೆಗಳು ಆಗಿವೆ.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಆಷಾಢ ಮಾಸದ ಮೊದಲ ಶುಕ್ರವಾರದಂದು ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬರುತ್ತಿದೆ. ಇಂದು ಮುಂಜಾನೆ ಚಾಮುಂಡೇಶ್ವರಿಗೆ ವಿವಿಧ, ಪೂಜೆ ಪುನಸ್ಕಾರದ ಬಳಿಕ ಭಕ್ತಾದಿಗಳಿಗೆ ದರ್ಶನ ಪಡೆಯಲು ಅನುವು ಮಾಡಿಕೊಡಲಾಗಿದೆ. ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ದರ್ಶನ ಪಡೆಯಲು 300 ರೂಪಾಯಿ ಹಾಗೂ 50 ರೂಪಾಯಿಗೆ ಧರ್ಮ ದರ್ಶನಕ್ಕೆ ಅವಕಾಶವಿದೆ.
ಖಾಸಗಿ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದ್ದು, ಬೆಟ್ಟಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಲಲಿತ್ ಮಹಲ್ ಮೈದಾನದಿಂದ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸ್ ವ್ಯವಸ್ಥೆ ಇದೆ. 30 ಮಂದಿ ಬಾಣಸಿಗರು 30 ಸಾವಿರ ಮೈಸೂರು ಪಾಕ್ ತಯಾರಿಸಿದ್ದಾರೆ.