ಮೈಸೂರು : ಆಶಾಡ ಶುಕ್ರವಾರ ಬಂದ್ರೆ ಸಾಕು ಚಾಮುಂಡೇಶ್ವರಿ ಭಕ್ತರಿಗೆ ಸಂಭ್ರಮವೋ ಸಂಭ್ರಮ. ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೇಳುತ್ತಾರೆ. ಚಾಮುಂಡಿಬೆಟ್ಟದಲ್ಲಿ ಮೊದಲ ಆಶಾಡ ಶುಕ್ರವಾರ ಹಿನ್ನೆಲೆ ಶುಕ್ರವಾರ ನಾಡ ದೇವತೆ, ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಮುಂಜಾನೆ 3 ಗಂಟೆ 30 ನಿಮಿಷಕ್ಕೆ ಅಭಿಷೇಕದೊಂದಿಗೆ ಆರಂಭವಾಗುವ ವಿವಿಧ ರೀತಿಯ ಪೂಜಾ ಕೈಂಕರ್ಯ ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಲಿವೆ. ಶುಕ್ರವಾರ ದೇವಿಗೆ ಲಕ್ಷ್ಮೀ ಅಲಂಕಾರ ಮಾಡಿ ಬಳಿಕ 5 ಗಂಟೆ 30 ನಿಮಿಷಕ್ಕೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಕಿರಿದಾದ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಬಾರದೆಂದು ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. 50 ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ.ಕೊವಿಡ್ ಮುಂಜಾಗ್ರತಾ ಕ್ರಮವಾಗಿ ಎರಡು ಡೋಸ್ ವ್ಯಾಕ್ಸಿನೇಷನ್ ಆಗಿರಬೇಕು ಇಲ್ಲದಿದ್ದರೆ. 72 ಗಂಟೆಗಳ ಒಳಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಇರಬೇಕು.
ಇನ್ನೂ ಶುಕ್ರವಾರ ಪ್ರಸಾದ ನೀಡಲು ಚಾಮುಂಡೇಶ್ವರಿ ಸೇವಾ ಸಮಿತಿಯವರು 35 ಸಾವಿರ ಹಾರ್ಲಿಕ್ಸ್ ಮೈಸೂರು ಪಾಕ್ ತಯಾರಿಸಿದ್ದಾರೆ. 200 ಬಾಣಸಿಗರು ಕಳೆದ ಎರಡು ದಿನದಿಂದ ಶ್ರಮ ವಹಿಸಿ ಮೈಸೂರು ಪಾಕ್ ತಯಾರಿಸಿದ್ದಾರೆ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಉಪಾಹಾರದಿಂದ ಆರಂಭವಾಗುವ ದಾಸೋಹ ರಾತ್ರಿ 9.30 ಗಂಟೆ ತನಕ ನಿರಂತರವಾಗಿ ನಡೆಯಲಿದೆ. ನೂಕು ನುಗ್ಗಲು ಆಗದಂತೆ ದೇವಿಯ ದರ್ಶನಕ್ಕೆ ಹಾಗೂ ದಾಸೋಹಕ್ಕೆ ತಡೆಕಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಶುಕ್ರವಾರದಂದು ಶಕ್ತಿ ದೇವತೆಯನ್ನು ಪೂಜಿಸಿದವರಿಗೆ ವಿಘ್ನಗಳು ನಿರವಾರಣೆಯಾಗಿ, ಇಷ್ಠಾರ್ಥ ಸಿದ್ಧಿಸುತ್ತದೆ ಎಂದು ಪುರಾಣ ಹೇಳುತ್ತದೆ. ಈ ನಿಟ್ಟಿನಲ್ಲಿ ಮೈಸೂರು ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಲಕ್ಷಾಂತರ ಭಕ್ತರು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಲಿದ್ದಾರೆ.
ಸುರೇಶ್ ಬಿ.ಪವರ್ ಟಿವಿ ಮೈಸೂರು.