Saturday, November 23, 2024

ಮೋದಿ ವಿರುದ್ಧ ಸುಳ್ಳು ಮಾಹಿತಿ ಆರೋಪ: ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ

ಮುಂಬೈ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ಮಹಾರಾಷ್ಟ್ರದ ರಾಜಧಾನಿ ಮುಂಬಯಿಯಲ್ಲಿ ಬಂಧಿಸಿದೆ.

ತೀಸ್ತಾ ಅವರ ಎನ್ಜಿಒಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಗುಜರಾತ್ನ ಎಟಿಎಸ್ ತಂಡವು ತೀಸ್ತಾ ಅವರ ಮನೆಗೆ ತೆರಳಿ ಅವರನ್ನು ಬಂಧಿಸಿದ ಬಳಿಕ ಮುಂಬಯಿಯಲ್ಲಿನ ಸಾಂಟಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ. 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಆದೇಶವನ್ನು ಶುಕ್ರವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರು ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ತೀಸ್ತಾ ಅವರನ್ನು ಬಂಧಿಸಿರುವುದು ರಾಜಕೀಯ ತಿರುವು ಪಡೆದುಕೊಳ್ಳುವ ಸೂಚನೆ ನೀಡಿದೆ.

ಗುಜರಾತ್ ಗಲಭೆಯಲ್ಲಿ ಹಿಂಸಾಚಾರದ ವೇಳೆ ಮೃತಪಟ್ಟಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ನಾನು ಸುಪ್ರೀಂಕೋರ್ಟ್ ತೀರ್ಪನ್ನು ಬಹಳ ಸೂಕ್ಷ್ಮವಾಗಿ ಓದಿದ್ದೇನೆ. ಈ ತೀರ್ಪಿನಲ್ಲಿ ತೀಸ್ತಾ ಸೆಟಲ್ವಾಡ್ ಅವರ ಹೆಸರನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಅವರು ನಡೆಸುತ್ತಿರುವ ಎನ್‌ಜಿಒದ ಹೆಸರು ನನಗೆ ನೆನಪಿಲ್ಲ- ಅದು ಗಲಭೆ ಕುರಿತಂತೆ ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿತ್ತು ಎಂದು ಅಮಿತ್ ಶಾ ಕಿಡಿಕಾರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಫ್ರಿ ಅವರ ಭಾವನೆಗಳನ್ನು ತೀಸ್ತಾ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಅಮಿತ್ ಶಾ ಸಂದರ್ಶನದಲ್ಲಿ ಹೇಳಿದ್ದರು. ಜಾಕಿಯಾ ಜಾಫ್ರಿ ಅವರು ಬೇರೆ ಯಾರದ್ದೋ ಸೂಚನೆಗಳಂತೆ ನಡೆದುಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅನೇಕ ಸಂತ್ರಸ್ತರ ಅಫಿಡವಿಟ್‌ಗಳಿಗೆ ಎನ್‌ಜಿಒ ಸಹಿ ಹಾಕಿದೆ. ಆದರೆ ಅದು ಅವರಿಗೆ ಗೊತ್ತೇ ಇಲ್ಲ. ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ಇದನ್ನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಯುಪಿಎ ಸರ್ಕಾರ ಆ ಸಮಯದಲ್ಲಿ ಅಧಿಕಾರಕ್ಕೆ ಬಂದಾಗ, ಎನ್‌ಜಿಒಗೆ ಅದು ಸಹಾಯ ಮಾಡಿತ್ತು ಎಂದು ಆರೋಪಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಈ ಬಂಧನವಾಗಿರೋದು ಬಹಳ ಚರ್ಚೆಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES