ವಿಜಯಪುರ : ಇನ್ಮುಂದೆ ಜಿಲ್ಲೆಯಲ್ಲಿ ಸಣ್ಣದಾದ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೂ ಅಂತಹ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ ಸಬ್ ಡಿವಿಜನ್ ವ್ಯಾಪ್ತಿಯಲ್ಲಿ ಬರುವ ವಿವಿಧ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ರೌಡಿಗಳ ಪರೇಡ್ ನಂತರ ಮಾತನಾಡಿದ ಅವರು, ರೌಡಿಶೀಟರ್ನಲ್ಲಿರುವ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ರೌಡಿಗಳು, ಸಮಾಜದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿರುವವರು, ಇನ್ಮುಂದೆ ಇವನ್ನೆಲ್ಲ ಬಿಟ್ಟುಬಿಡಬೇಕು, ಒಂದೇ ಒಂದು ಸಣ್ಣ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಅವರ ಬಾಲವನ್ನು ಹೇಗೆ ಕಟ್ ಮಾಡಬೇಕು ಎಂಬುದೂ ನಮಗೆ ಗೊತ್ತು ಎಂದು ಎಚ್ಚರಿಕೆ ನೀಡಿದರು.
ಇನ್ನೂ ಯಾವುದೇ ಕ್ರೈಂನಲ್ಲಿ ನಿಮ್ಮ ಹೆಸರನ್ನು ಕೇಳಿದರೆ ಗ್ರಹಚಾರ ಬಿಡಿಸುವೆ ಎಂದು ವಾರ್ನ್ ನೀಡಿದ ಎಸ್ ಪಿ ಕೆಲ ರೌಡಿ ಶೀಟರ್ಗಳಿಗೆ ಲಾಠಿ ಏಟು ಹಾಕಿ ಗದರಿದರು. ಅಕ್ರಮ ಕಂಟ್ರೀ ಪಿಸ್ತೂಲ್ ಸಂಗ್ರಹ ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ ಗಳ ಬೆವರಿಳಿಸಿದ ಎಸ್ ಪಿ ಆನಂದಕುಮಾರ ಗಾಂಧಿಚೌಕ್, ಜಲನಗರ, ಗೋಲಗುಂಬಜ್, ಎಪಿಎಂಸಿ, ಆದರ್ಶನಗರ, ವಿಜಯಪುರ ಗ್ರಾಮೀಣ ಠಾಣೆ, ತಿಕೋಟಾ ಹಾಗೂ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ರೌಡಿ ಶೀಟರ್ಸ್ ಪರೇಡ್ ನಡೆಸಿದರು.