Friday, November 8, 2024

ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್​​ಗೆ ಧಿಕ್ಕಾರವಿರಲಿ : ಬಿಜೆಪಿ ಆಕ್ರೋಶ

ಬೆಂಗಳೂರು: ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ ಪಕ್ಷಕ್ಕೆ  ಧಿಕ್ಕಾರವಿರಲಿ ಎಂದು ಬಿಜೆಪಿಯು ಇಂದು ಸರಣಿ ಟ್ವಿಟ್ ಮಾಡುವ​​ ಮೂಲಕ ಕಿಡಿಕಾರಿದೆ.

1975ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಈ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಹುಯಿಲೆಬ್ಬಿಸುವ ಕಾಂಗ್ರೆಸ್ಸಿಗರಿಗೆ ಘೋಷಿತ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯ ಮರೆತು ಹೋಗಿದೆ. ಬ್ರಿಟಿಷ್ ಕಾಲದಲ್ಲಿ ನಡೆದ ದೌರ್ಜನ್ಯ ಮೀರಿಸುವ ರೀತಿ‌ ಇಂದಿರಾ ಗಾಂಧಿ ದೇಶವಾಸಿಗಳನ್ನು ಹಿಂಸಿಸಿದ್ದನ್ನು ಮರೆಯಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಸಿದ್ದರಾಮಯ್ಯ, ಡಿಕೆಶಿ, ಮಹಾದೇವಪ್ಪ ಮೊದಲಾದವರಿಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದ ಮಹಾನ್ ಕುಟುಂಬ ಯಾವುದು ಎಂಬುದೇ ಗೊತ್ತಿಲ್ಲ. ಸತ್ಯವನ್ನು ಗ್ರಹಿಸದ ನಿಮ್ಮ ಏಕಮುಖ ರಸ್ತೆಯ ಪ್ರಯಾಣದ ಬಗ್ಗೆ ವಿಷಾದ ಮಾತ್ರ ವ್ಯಕ್ತಪಡಿಸಲು ಸಾಧ್ಯ!’ ಎಂದು ಟೀಕಿಸಿದ್ದಾರೆ.

‘ಸ್ವಾತಂತ್ರ್ಯಾನಂತರ ದೇಶದ ಪ್ರಜಾತಂತ್ರದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ. ತಮ್ಮ ಸ್ವಾರ್ಥಕ್ಕಾಗಿ ಈಡಿ ದೇಶವನ್ನೇ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕತ್ತಲೆಯಲಿಟ್ಟರು. ಕಾಂಗ್ರೆಸ್‌ ನಾಯಕರು ನಕಲಿ ಗಾಂಧಿ ಕುಟುಂಬದ ಪಾದಪೂಜೆ ಮಾಡುವ ಮುನ್ನ ಇತಿಹಾಸದ ಪುಟಗಳನ್ನು ತಿರುವಿಹಾಕಲಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ.

‘ಸಂವಿಧಾನದಲ್ಲಿ ಉಲ್ಲೇಖವಾದ ವಿಚಾರಗಳನ್ನೇ ಗುರಾಣಿಯಾಗಿ ಬಳಸಿಕೊಂಡ ಇಂದಿರಾ ಗಾಂಧಿ ಅವರು ಸಂವಿಧಾನವನ್ನು ಕಾಲಡಿಗೆ ಹಾಕಿದ್ದರು. ಎಷ್ಟಾದರೂ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ ಅನುಭವ ಇತ್ತಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಜಾವಾದಿ ಸಿದ್ದರಾಮಯ್ಯ ಅವರೇ, ನೀವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೀರಾ?, ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪರಿಗಣಿಸಲ್ಪಟ್ಟ ತುರ್ತು ಪರಿಸ್ಥಿತಿ ವಿರೋಧಿ ಹೋರಾಟದಲ್ಲಾದರೂ ಭಾಗಿಯಾಗಿದ್ದಿರಾ? ಇಲ್ಲ, ಇಲ್ಲ, ಇಲ್ಲ. ನಿಮ್ಮದೇನಿದ್ದರೂ ಅಧಿಕಾರದ ಪಾಯಸ ಉಣ್ಣಲು ಹೋರಾಟವಷ್ಟೇ’ ಎಂದು ವ್ಯಂಗ್ಯವಾಡಿದ್ದಾರೆ.

21 ತಿಂಗಳ ತುರ್ತು ಪರಿಸ್ಥಿತಿ, ಲಕ್ಷಕ್ಕೂ ಅಧಿಕ ಜನರ ಬಂಧನ, ಜೈಲುವಾಸ ಹಾಗೂ 22ಕ್ಕೂ ಅಧಿಕ ಸಂಗ್ರಾಮಿಗಳ ಕಸ್ಟಡಿ ಸಾವು – ಇದು ನಕಲಿ ಗಾಂಧಿ ಕುಟುಂಬದ ವಿರುದ್ಧದ ಧ್ವನಿ ಹತ್ತಿಕ್ಕಲು ಮಾಡಿದ ಪ್ರಯತ್ನಗಳು. ತುರ್ತು ಪರಿಸ್ಥಿತಿಯಂಥ ಕರಾಳ ಇತಿಹಾಸಕ್ಕೆ ಮುನ್ನುಡಿ ಬರೆದ ಕಾಂಗ್ರೆಸ್‌ ಪಕ್ಷಕ್ಕೆ ಧಿಕ್ಕಾರವಿರಲಿ ಎಂದು ಬಿಜೆಪಿಗರು ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES