ಕಲಬುರಗಿ : ದೇವಸ್ಥಾನಗಳ ಹುಂಡಿಗಳಲ್ಲಿನ ಹಣವನ್ನ ಕಳ್ಳರು ದೋಚಿಕೊಂಡು ಹೋಗುವ ಪ್ರಕರಣಗಳನ್ನ ನಾವು ಕೇಳಿರ್ತಿವಿ ನೋಡಿರ್ತಿವಿ. ಆದರೆ ಇಲ್ಲೊಂದು ಐತಿಹಾಸಿಕ ದೇವಸ್ಥಾನವಿದೆ. ಇಲ್ಲಿನ ಅರ್ಚಕರು ದೇವಸ್ಥಾನಕ್ಕೆ ಆನ್‌ಲೈನ್ ಮೂಲಕ ಸಲ್ಲಿಕೆಯಾಗುವ ಕೋಟ್ಯಾಂತರ ರೂಪಾಯಿ ಹಣವನ್ನ ಕೊಳ್ಳೆಹೊಡೆದು ಸರ್ಕಾರಕ್ಕೆ ವಂಚಿಸಿದ್ದಾರೆ. ಅಷ್ಟಕ್ಕೂ ವಂಚಕ ಅರ್ಚಕರ ಕಳ್ಳಾಟದ ವಿಸ್ತೃ ತ ವರದಿ ಇಲ್ಲಿದೆ.
ರಾಜ್ಯದ ಜನತೆಯಲ್ಲದೇ ಸರ್ಕಾರವೇ ತಲೆ ತಗ್ಗಿಸುವಂತೆ ಮಾಡಿದ್ದ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ದೇಗುಲ ಅರ್ಚಕರಿಂದ ಫೆಕ್ ವೆಬ್‌ಸೈಟ್ ಕ್ರಿಯೇಟ್ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂ. ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪವರ್ ಟಿವಿ ವರದಿ ಪ್ರಸಾರ ವರದಿ ಬೆನ್ನಲ್ಲೆ ಐವರು ಅರ್ಚಕರ ವಿರುದ್ಧ FIR ದಾಖಲಾಗಿದೆ. ಅರ್ಚಕರಾದ ವಲ್ಲಭ ದಿನಕರ್ ಭಟ್, ಅಂಕೂರ್ ಪೂಜಾರಿ, ಪ್ರತೀಕ್ ಪೂಜಾರಿ, ಗಂಗಾಧರ್ ಪೂಜಾರಿ, ಶರತ್ ಭಟ್ ವಿರುದ್ಧ ದೂರು ದಾಖಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಅಧಿಕೃತ ವೆಬ್‌ಸೈಟ್ www.devalgangapur.com ಹೊರತುಪಡಿಸಿ 8 ಫೇಕ್ ವೆಬ್‌ಸೈಟ್‌ಗಳನ್ನ ಕ್ರಿಯೆಟ್ ಮಾಡಿ ಕಳೆದ ಐದಾರು ವರ್ಷಗಳಿಂದ ಸರಿಸುಮಾರು 40 ಕೋಟಿಗೂ ಅಧಿಕ ಹಣವನ್ನ ತಮ್ಮ ಖಾತೆಗೆ ಸಲ್ಲಿಕೆ ಮಾಡಿಕೊಂಡಿದ್ದರು.
ಇನ್ನೂ ಕಳೆದ ವಾರ ದೇಗುಲದ ಆಡಳಿತ ಮಂಡಳಿ ಜೊತೆ ಸಭೆ ನಡೆಸಲು ಜಿಲ್ಲಾಧಿಕಾರಿ ಭೇಟಿ ನೀಡಿದ್ದಾಗ ಅಧಿಕೃತ ವೆಬ್‌ಸೈಟ್ ಹೊರೆತುಪಡಿಸಿ ಏಳೆಂಟು ಫೆಕ್ ವೆಬ್‌ಸೈಟ್‌ಗಳು ಪತ್ತೆಯಾಗಿವೆ. ಕಳೆದ ಐದಾರು ವರ್ಷಗಳಿಂದ ಐವರು ಅರ್ಚಕರು ಸೇರಿಕೊಂಡು ನಕಲಿ ವೆಬ್‌ಸೈಟ್‌ಗಳನ್ನ ಕ್ರಿಯೆಟ್ ಮಾಡಿ 40 ಕೋಟಿಗೂ ಅಧಿಕ ಹಣ ಕೊಳ್ಳೆ ಹೊಡೆದಿದ್ದು, ಆರೋಪ ಸಾಬೀತಾದ್ರೆ ಕೊಳ್ಳೆ ಹೊಡೆದ ಹಣವನ್ನ ಅರ್ಚಕರಿಂದಲೇ ವಸೂಲಿ ಮಾಡಬೇಕು ಅಂತಾ ಡಿಸಿ ಆದೇಶ ಹೊರಡಿಸಿದ್ದಾರೆ.
ಅದೇನೆ ಇರಲಿ ದೇವರಿಗೆ ಸಲ್ಲಿಕೆಯಾಗಬೇಕಿದ್ದ ಕಾಣಿಕೆಯನ್ನ ವಂಚಕ ಅರ್ಚಕರು ಕೊಳ್ಳೆ ಹೊಡೆದಿದ್ದರ ಬಗ್ಗೆ ಭಕ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದ್ದು, ಸೂಕ್ತ ತನಿಖೆ ನಂತರವಷ್ಟೇ ಎಷ್ಟು ಹಣ ಲಪಟಾಯಿಸಿದ್ದಾರೆಂಬ ಸ್ಪಷ್ಟ ಮಾಹಿತಿ ಸಿಗಲಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ