ಬೆಂಗಳೂರು : ಬಸವರಾಜ ಬೊಮ್ಮಾಯಿ ದೆಹಲಿ ಪರೇಡ್ ಹೆಚ್ಚಾಗಿದೆ. ಇದೀಗ ಮತ್ತೆ ದೆಹಲಿ ನಾಯಕರು ಬುಲಾವ್ ನೀಡಿದ್ದು, ದೆಹಲಿಗೆ ತೆರಳಿದ್ದಾರೆ. ಇತ್ತ ಸಿಎಂ ದೆಹಲಿಗೆ ತೆರಳುತ್ತಿದ್ದಂತೆ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಕೂಡ ಹೆಚ್ಚಾಗಿದೆ.
ಪ್ರತಿ ಬಾರಿ ಸಿಎಂ ದೆಹಲಿಗೆ ಹೋದಾಗಲೆಲ್ಲಾ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗುತ್ತದೆ. ಇದ್ರ ಜೊತೆಗೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತದೆ. ಮೊನ್ನೆ ಮೋದಿ ಬಂದು ಸಿಎಂ ಬೊಮ್ಮಾಯಿ ಕೆಲಸಕ್ಕೆ ಬೇಷ್ ಎಂದು ಹೋಗಿದ್ದಾರೆ.. ಹೀಗಾಗಿ, ಸಿಎಂ ಬದಲಾವಣೆ ಇಲ್ಲ ಎಂಬ ಸಂದೇಶ ಸಾರಿ ಹೋಗಿದ್ದಾರೆ. ಆದ್ರೆ ಈ ಬಾರಿ ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ನಾಮಪತ್ರಕ್ಕೆ ಸೂಚಕರಾಗಿ ಸಿಎಂ ಬೊಮ್ಮಾಯಿ ಸಹಿ ಹಾಕಲಿದ್ದಾರೆ.
ಇದಾದ ಬಳಿಕ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸುತ್ತಾರೆ ಎನ್ನಲಾಗಿದೆ. ಹೀಗಾಗಿ, ಈ ಬಾರಿ ಸಚಿವ ಸಂಪುಟ ವಿಸ್ತರಣೆಗೆ ಕ್ಲೈಮ್ಯಾಕ್ಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದ್ರ ಜೊತೆಗೆ, ಸಂಪುಟ ವಿಸ್ತರಣೆಯೋ ಅಥವಾ ಚುನಾವಣೆವರೆಗೆ ಸಂಪುಟ ವಿಸ್ತರಣೆಯಾಗೋದಿಲ್ಲವೋ ಎಂಬ ಎರಡು ಪ್ರಶ್ನೆಗೆ ಉತ್ತರವೂ ಸಿಗಲಿದೆ.
ಸಿಎಂ ದೆಹಲಿ ಭೇಟಿ ಫಿಕ್ಸ್ ಆಗುತ್ತಿದ್ದಂತೆ ಬೊಮ್ಮಾಯಿ ಭೇಟಿಗೆ ಹಲವು ಶಾಸಕರು ಆಗಮಿಸಿದ್ದರು. 40% ಕಮಿಷನ್ ಸಂಬಂಧ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಸಿಎಂ ಭೇಟಿಯಾಗಿ ಸಂಪುಟಕ್ಕೆ ಮರು ಸೇರ್ಪಡೆಗೆ ಮನವಿ ಮಾಡಿಕೊಂಡರು. ಹಾಗೆಯೇ ಪರಿಷತ್‌ಗೆ ಆಯ್ಕೆಯಾದ ಲಕ್ಷಣ ಸವದಿ, ಸಂಪುಟ ವಿಸ್ತರಣೆ ವೇಳೆ ತಮ್ಮನ್ನ ಪರಿಗಣಿಸುವಂತೆ ಮನವಿ ಮಾಡಿಕೊಂಡರು. ಹಾಗೆಯೇ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿ.ಪಿ.ಯೋಗೇಶ್ವರ್, ಯತ್ನಾಳ್, ದತ್ತಾತ್ರೆಯ ಪಾಟೀಲ್ ರೇವೂರ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಮಂದಿಯಿದ್ದಾರೆ. ಹೀಗಾಗಿ ಈ ಬಾರಿ ಸಚಿವ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ ಖಾಲಿಯಿದ್ದ ಎಲ್ಲಾ ಸ್ಥಾನಗಳು ಭರ್ತಿಯಾಗಲಿವೆ. ಈ ಮೂಲಕ ಆಡಳಿತಕ್ಕೆ ಮತ್ತಷ್ಟು ಚುರುಕು ನೀಡಬಹುದು ಎಂಬ ಆಶಯ ಸಿಎಂ ಬಸವರಾಜ ಬೊಮ್ಮಾಯಿ ಅವರದ್ದು. ಆದ್ರೆ, ರಾಷ್ಟ್ರಪತಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲು ಬಂದಿದ್ದೇನೆ. ಯಾವುದೇ ರಾಜಕೀಯ ವಿಚಾರ ಇಲ್ಲ ಎನ್ನುತ್ತಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.
ಈ ಬಾರಿ ನಿಗಮ ಮಂಡಳಿ ಪಟ್ಟಿ ಸಿದ್ಧವಾಗಿದೆ. ಆದ್ರೆ, ಇನ್ನುಈ ಪಟ್ಟಿಗೆ ಹೈಕಮಾಂಡ್ ಅಂಗೀಕಾರ ಸಿಕ್ಕಿಲ್ಲ. ಈ ಹಿಂದೆ ಬಿಎಸ್‌ವೈ ತಮ್ಮ ಬೆಂಬಲಿಗರಿಗೆ ಹೆಚ್ಚು ಅವಕಾಶ ಕೊಟ್ಟಿದ್ದು, ಸಂಘ ನಿಷ್ಠರು ಮತ್ತು ಪಕ್ಷಕ್ಕಾಗಿ ಕೆಲಸ ಮಾಡಿದ ಹಲವರ ಪಟ್ಟಿಯನ್ನು ಬೊಮ್ಮಾಯಿ, ಕಟೀಲ್ ಸಿದ್ಧ ಮಾಡಿಕೊಂಡಿದ್ದಾರೆ. ಹೀಗಾಗಿ ಯಾವುದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ.
ಕ್ಯಾಮರಮ್ಯಾನ್ ರಮೇಶ್ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ